ಮುಂಬಯಿ: ಎರಡು ಗಂಟೆಯ ಕವಿಗೋಷ್ಠಿ ಒಂದೇ ತಾಸಿನಲ್ಲಿ ಪೂರೈಸುವುದೇ ಒಂದು ರೀತಿಯ ಕಷ್ಟಕರವಾಗುತ್ತಿದೆ. ಇವತ್ತಿನ ಎಲ್ಲಾ ಕವಿಗಳು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿ ದ್ದಾರೆ. ಕಾರಣ ಇವರೆಲ್ಲರ ಕವಿತ ವಸ್ತು, ಆಸೆ, ಲಯ ಅದ್ಭುತವಾಗಿತ್ತು. ಕವಿ ಪರಂಪರೆ ಪ್ರಾಮಾಣಿಕವಾಗಿ ಬರೆಸಿಕೊಂಡಿದೆ. ಚಂದಾರೆಗಳನ್ನು ಚಿತ್ತಾರದೊಳಗೆ ಆಕರ್ಷಿತ ಆಗದಿದ್ದರೆ ಕವಿತೆಗಳು ಜನಾಕರ್ಷಿತವಾಗದು. ಕವಿತೆಗಳ ಮೂಲಕ ಸಮಾಜಕ್ಕೆ ಉತ್ತರಿಸುವುದು ಕವಿಗಳ ಧರ್ಮ ಆಗಬೇಕು. ಕವಿಗಳಿಗೆ ಸಮೂಹ ಚಿತ್ರಣ ಬಂದಾಗ ಕಾವ್ಯ ಲೋಕ, ವಿಚಾರಗಳಿಗೆ ಬಾಲ್ಯ ಬಂದಾಗ ಕವಿತೆಗಳಿಗೆ ಹೊಸ ಲೋಕಸೃಷ್ಟಿಯಾಗುತ್ತದೆ ಎಂದು ಪ್ರಸಿದ್ಧ ಕವಿ, ಸಾಹಿತಿ ಡಾ| ರಂಗರಾಜ ವನದುರ್ಗ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪ ನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಫೆ. 11ರಂದು ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಎರಡನೇ ದಿನ ಸಮ್ಮೇಳನಾಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ರಂಗರಾಜ ವನದುರ್ಗ ಮಾತನಾಡಿದರು.
ಕವಿತೆ ಪ್ರಸ್ತುತಪಡಿಸಿದವರು
ಕವಿ ಗೋಷ್ಠಿಯಲ್ಲಿದ್ದ ಡಾ| ಗುಂಡಣ್ಣ ಕಲಬುರ್ಗಿ, ಡಾ| ಅಶೋಕ ನರೋಡೆ, ನಿರ್ಮಲಾ ಸಿ. ಯಲಿಗಾರ್, ವಿ. ಎಸ್. ಶ್ಯಾನ್‌ಭಾಗ್, ಮಲ್ಲಿಕಾರ್ಜುನ ಗುಮ್ಮಗೋಳ, ಗೊರೂರು ಪಂಕಜ, ಶಂಕರ ಬೈಚಬಾಳ, ಸಾದಯಾ, ತುಳಸಿ ವೇಣುಗೋಪಾಲ, ನ್ಯಾಯವಾದಿ ಅಮಿತಾ ಭಾಗವತ್, ಗೋಪಾಲ ತ್ರಾಸಿ, ಡಾ| ಗಿರಿಜಾ ಶಾಸ್ತ್ರಿ, ಡಾ| ರಾಜೇಂದರ್ ಗಡಾದ ಅರು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.
ಪ್ರಾರಂಭದಲ್ಲಿ ಎನ್‌ಕೆಇಎಸ್ ವಡಾಲ ಇದರ ಶಾಲಾ ಮಕ್ಕಳು “ಪುಣ್ಯಕೋಟಿ ಗೋವಿನ ಕತೆ’ ಕನ್ನಡ ನಾಟಕ ಹಾಗೂ ಚೆಂಬೂರು ಕರ್ನಾಟಕ ಸಂಘದ ಶಾಲಾ ವಿದ್ಯಾರ್ಥಿಗಳು ನೃತ್ಯ ವೈವಿಧ್ಯತೆಗಳೊಂದಿಗೆ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಪ್ರದರ್ಶಿಸಿದರು. ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ರಜನಿ ವಿ. ಪೈ ಕಾರ್ಯಕ್ರಮ ನಿರೂಪಿಸಿದರು. ಮಂಜು ದೇವಾಡಿಗ ವಂದಿಸಿದರು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್