Advertisement

Election ತೆಲಂಗಾಣದಲ್ಲಿ ರಾಷ್ಟ್ರೀಯ ಪ್ರಚಾರ

12:49 AM Nov 27, 2023 | Team Udayavani |

ಪಂಚರಾಜ್ಯ ಚುನಾವಣೆಗಳ ಪೈಕಿ ಮಿಜೋರಾಂ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿನ ಮತದಾನ ಮುಕ್ತಾಯವಾಗಿದೆ. ನ.30ರಂದು ತೆಲಂಗಾಣದಲ್ಲಿ ಹಕ್ಕು ಚಲಾವಣೆ ನಡೆಯಲಿದೆ. ಬಹಿರಂಗ ಪ್ರಚಾರ ನ.28ಕ್ಕೆ ಮುಗಿಯುವುದರಿಂದ ಬಿಜೆಪಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಮತದಾರರನ್ನು ಸೆಳೆಯಲು ಗರಿಷ್ಠ ಯತ್ನ ಹಾಕಿದ್ದಾರೆ.

Advertisement

ಕೊಚ್ಚಿ ಹೋಗಲಿದೆ ಐ.ಎನ್‌.ಡಿ.ಐ.ಎ. ಮೈತ್ರಿಕೂಟ
ಹೈದರಾಬಾದ್‌: ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯ ಪ್ರದೇಶಗಳಲ್ಲಿ ಐ.ಎನ್‌.ಡಿ.ಐ.ಎ. ಮೈತ್ರಿಕೂಟ ಕೊಚ್ಚಿಹೋಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ನ.30ರಂದು ಮತದಾನ ನಡೆಯಲಿರುವ ತೆಲಂಗಾಣದ ತೂಪ್‌ರಾನ್‌ ಎಂಬಲ್ಲಿ ರವಿವಾರ ಚುನಾವಣ ರ‍್ಯಾಲಿಯಲ್ಲಿ ಮಾತನಾಡಿದರು. ಪಂಚರಾಜ್ಯಗಳಲ್ಲಿನ ಚುನಾವಣ ಪ್ರಚಾರದ ಸಂದ ರ್ಭಗಳಲ್ಲಿ ವ್ಯಕ್ತವಾದ ಜನರ ಅಭಿಪ್ರಾಯ ಏನೆಂದರೆ ಅವರು ಐ.ಎನ್‌.ಡಿ.ಐ.ಎ. ಮೈತ್ರಿಕೂಟದ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ. ಈ ಬಾರಿ ಒಕ್ಕೂಟ ನೆಲ ಕಚ್ಚಲಿದೆ. ಕಾಂಗ್ರೆಸ್‌ ವಿರುದ್ಧ ಮಹಿಳೆಯರು, ರೈತರು ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ರಾಜ್ಯದ ಜನರನ್ನೇ ಭೇಟಿ ಯಾಗುತ್ತಿಲ್ಲ. ಇಂಥ ಮುಖ್ಯಮಂತ್ರಿ ರಾಜ್ಯಕ್ಕೆ ಅಗತ್ಯ ಇದೆಯೇ ಎಂದು ಪ್ರಧಾನಿ ಪ್ರಶ್ನಿಸಿದರು. ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌, ಈ ಎರಡೂ ಪಕ್ಷಗಳ ಪ್ರಧಾನ ಗುರುತು ಎಂದರೆ ಭ್ರಷ್ಟಾಚಾರ ಎಂದು ಮೋದಿ ದೂರಿದರು.

ಇಂದು ತಿರುಪತಿಯಲ್ಲಿ ಪೂಜೆ: ಚುನಾವಣ ಪ್ರಚಾರದ ಬಳಿಕ ಪ್ರಧಾನಿ ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿದ್ದಾರೆ. ಅವರನ್ನು ಆಂಧ್ರ ರಾಜ್ಯಪಾಲ ನಿವೃತ್ತ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌, ಸಿಎಂ ಜಗನ್ಮೋಹನ ರೆಡ್ಡಿ ಸೇರಿದಂತೆ ಪ್ರಮುಖರು ಬರಮಾಡಿಕೊಂಡರು. ಸೋಮವಾರ ಬೆಳಗ್ಗೆ ತಿರುಮಲ ಶ್ರೀವೆಂಕಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತ್ತೆ ತೆಲಂಗಾಣದಲ್ಲಿ ಪ್ರಚಾರಕ್ಕೆ ತೆರಳಲಿದ್ದಾರೆ.

Advertisement

ಬಿಆರ್‌ಎಸ್‌-ಕಾಂಗ್ರೆಸ್‌ ನಡುವೆ ಡೀಲ್‌
ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ನಡುವೆ ರಹಸ್ಯ ಒಪ್ಪಂದವಾಗಿದೆ. ಅದರ ಅನ್ವಯ ರಾಹುಲ್‌ ಗಾಂಧಿ ಯವರನ್ನು ಪ್ರಧಾನಿ ಪದಕ್ಕೆ, ಕೆ.ಚಂದ್ರಶೇಖರ ರಾವ್‌ ಅವರನ್ನು ತೆಲಂಗಾಣದ ಸಿಎಂ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಸಹಮತಕ್ಕೆ ಬರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ತೆಲಂಗಾಣದ  ಚುನಾವಣ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಆರ್‌ಎಸ್‌ ಗೆಲ್ಲುವಂತೆ ಕಾಂಗ್ರೆಸ್‌ ನೆರವು ನೀಡಿದರೆ, ಮುಂದಿನ ಲೋಕಸಭೆ ಚುನಾವಣೆ ಯಲ್ಲಿ ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಏರಿಸುವ ನಿಟ್ಟಿನಲ್ಲಿ ರಹಸ್ಯ ಒಪ್ಪಂದವಾಗಿದೆ. ಈ ಚುನಾ ವಣೆಯಲ್ಲಿ ಕಾಂಗ್ರೆಸ್‌ ಬಿಆರ್‌ಎಸ್‌ ವಿರುದ್ಧ ನಿಂತರೆ ಈ ಸೂತ್ರ ಜಾರಿಯಾಗದು.

ಚೀನ ಸರಕಿನಂತೆ: ಕಾಂಗ್ರೆಸ್‌ ಶಾಸಕರನ್ನು ಚೀನ ಸರಕು ಎಂದು ಟೀಕಿಸಿದ ಕೇಂದ್ರ ಗೃಹ ಸಚಿ ವರು “ಅವರು ಯಾವ ಕ್ಷಣದಲ್ಲಿಯೂ ಕೂಡ ಬಿಆರ್‌ಎಸ್‌ಗೆ ಪಕ್ಷಾಂತರಗೊಳ್ಳಲಿದ್ದಾರೆ. ಅವರೆಲ್ಲ ಗ್ಯಾರಂಟಿ ಇಲ್ಲದ ಚೀನ ಉತ್ಪನ್ನಗಳಂತೆ’ ಎಂದರು.

ಮತದಾರರ ಮನವೊಲಿಕೆಗೆ ಅವಿರತ ಯತ್ನ
ತೆಲಂಗಾಣ ಚುನಾವಣೆ ತನ್ನ ಅಂತಿಮ ಹಂತಕ್ಕೆ ತಲುಪಿದೆ. ಬಿಆರ್‌ಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಮತದಾರರ ಮೇಲೆ ಪ್ರಭಾವ ಬೀರಲು ಶಕ್ತಿಮೀರಿ ಶ್ರಮ ಹಾಕುತ್ತಿವೆ. ಟಿಡಿಪಿ ತೆಲಂಗಾಣದಲ್ಲಿ ಸ್ಪರ್ಧೆ ಮಾಡದೇ ಇರುವುದರಿಂದ ಅದರ ಲಾಭ ಪಡೆ ಯಲೂ ಮೂರೂ ಪಕ್ಷಗಳು ಯತ್ನ ನಡೆಸಿವೆ. ನ.30ಕ್ಕೆ ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ನ.28ಕ್ಕೆ ಸಾರ್ವಜನಿಕ ಸಭೆಗಳು, ರ್ಯಾಲಿಗಳಿಗೆ ಕಡೆಯ ದಿನಾಂಕ. ಹೀಗಾಗಿ ಎಲ್ಲ ಪಕ್ಷಗಳ ಪ್ರಮುಖ ನಾಯಕರು ಸರಣಿಸರಣಿ ಸಭೆ ನಡೆಸುತ್ತಿದ್ದಾರೆ.

ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಮುಖ ಕ್ಷೇತ್ರಗಳಲ್ಲಿ ಬಿರುಸಿನ ಸಂಚಾರ ನಡೆಸಲಿದ್ದಾರೆ.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಪ್ರಚಾರ ನಡೆಸಲಿ ದ್ದಾರೆ. ಬಿಆರ್‌ಎಸ್‌ ನಾಯಕ ಕೆ. ಚಂದ್ರಶೇಖರ ರಾವ್‌ ಪಕ್ಷದ ಪಾಲಿಗೆ ನಿರ್ಣಾಯಕವಾಗಿರುವ ಕ್ಷೇತ್ರಗಳನ್ನು ಕೊನೆಗೆ ಉಳಿಸಿಕೊಂಡಿದ್ದಾರೆ.

ಬಿಆರ್‌ಎಸ್‌ಗೆ ಭರ್ಜರಿಯಾಗಿ ಗೆಲ್ಲುವ ಉತ್ಸಾಹ ವಿದೆ. ಆದರೆ ಅದರ ಓಟವನ್ನು ನಿಲ್ಲಿಸಲೇಬೇ ಕೆಂದು ಬಿಜೆಪಿ ತೀರ್ಮಾನ ಮಾಡಿದೆ. ಹಾಗಾಗಿ ಅದು ತನ್ನಲ್ಲಿ ಸಾಧ್ಯವಾದ ಎಲ್ಲವನ್ನೂ ಮಾಡು ತ್ತಿದೆ. ಕಾಂಗ್ರೆಸ್‌ಗೆ ಇಲ್ಲಿ ತನ್ನದೇ ಆದ ಪ್ರಭಾವವಿದೆ. ಅದನ್ನು ಹೆಚ್ಚಿಸಿಕೊಳ್ಳುವುದು ಅದರ ಉದ್ದೇಶ.

ಕಾಂಗ್ರೆಸ್‌ ಅವಧಿಯಲ್ಲಿ ಉಗ್ರ ದಾಳಿ, ಹಣದುಬ್ಬರ ಹೆಚ್ಚು
ಕಾಂಗ್ರೆಸ್‌ ನೇತೃತ್ವದ ಸರಕಾರದ ಅವಧಿಯಲ್ಲಿ ದೇಶದಲ್ಲಿ ಉಗ್ರ ದಾಳಿಗಳು ಹೆಚ್ಚಾಗಿದ್ದವು ಎಂದು ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. ಮೆಹಬೂಬ್‌ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಗಳಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಾಗಿದೆ. ಆದರೆ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹಣದುಬ್ಬರ ಪ್ರಮಾಣ, ಭಯೋತ್ಪಾದಕರ ದಾಳಿಗಳ ಪ್ರಮಾಣ ಹೆಚ್ಚಾಗಿತ್ತು ಎಂದು ದೂರಿದರು.

2008ರಂದು ಮುಂಬಯಿಗೆ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿಯೇ ಪಾಕ್‌ ಪ್ರೇರಿತ ಉಗ್ರರು ದಾಳಿ ನಡೆಸಿದ್ದರು. ತೆಲಂಗಾಣದಲ್ಲಿನ ಸರಕಾರ ವಂಶಪಾರಂಪರ್ಯದ್ದು ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಟೀಕಿಸಿದರು.

ರ‍್ಯಾಲಿಯಲ್ಲಿ ಕೋಪಗೊಂಡ ಖರ್ಗೆ
ಸದಾ ಶಾಂತ ಸ್ವಭಾವದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ತೆಲಂಗಾಣದ ಕಲ್ವಾಕುರ್ತಿ ಎಂಬಲ್ಲಿ ನಡೆದಿದ್ದ ಚುನಾವಣ ರ್ಯಾಲಿಯಲ್ಲಿ ಸಹನೆ ಕಳೆದುಕೊಂಡ ಘಟನೆ ನಡೆದಿದೆ. ಸಭೆಗೆ ಬಂದಿದ್ದವರೆಲ್ಲ ನಾಯಕರ ಮಾತುಗಳನ್ನು ಕೇಳದೆ ಗದ್ದಲ ಎಬ್ಬಿಸುತ್ತಿದ್ದ ಕಾರಣದಿಂದ ಖರ್ಗೆಯವರು ಜನರನ್ನು ನೋಡಿ “ಎಲ್ಲರೂ ಮೌನವಾಗಿ ಇರಬೇಕು. ನಿಮಗೆ ಆ ರೀತಿ ಇರಲು ಸಾಧ್ಯವಾಗದೇ ಇದ್ದರೆ ಇಲ್ಲಿಂದ ಹೋಗಿ, ಕಾಂಗ್ರೆಸ್‌ ನಾಯಕರು ಮಾತನಾಡುತ್ತಿರುವುದು ಕಾಣುತ್ತಿಲ್ಲವೇ? ನಿಮಗೆ ಮನಸ್ಸು ಬಂದಂತೆ ವರ್ತಿಸುತ್ತಿದ್ದೀರಾ? ನಿಮಗೆ ಮನಸ್ಸಾದರೆ ಇರಿ. ಇಲ್ಲದಿದ್ದರೆ ಹೋಗಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೀಡಿಯೋವನ್ನು ಹಂಚಿಕೊಂಡಿರುವ ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ “ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರೂ ಖರ್ಗೆಯವರಿಗೆ ಅವರ ಪಕ್ಷದ ಕಾರ್ಯಕರ್ತರೇ ಗೌರವ ನೀಡುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಬಿಆರ್‌ಎಸ್‌ ಮಾಡಿದ್ದೇನು ಎಂದು ಹೇಳಲಿ
ತೆಲಂಗಾಣಕ್ಕಾಗಿ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌) ಸರಕಾರದ ನೇತೃತ್ವ ವಹಿಸಿರುವ ಕೆ. ಚಂದ್ರಶೇಖರ ರಾವ್‌ ಮಾಡಿದ್ದೇನು ಎಂದು ವಿವರಿಸಲಿ ಎಂದು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಕಾಮ ರೆಡ್ಡಿ, ಸಂಗಾರೆಡ್ಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚುನಾವಣ ರ‍್ಯಾಲಿಗಳಲ್ಲಿ ಅವರು ಮಾತನಾಡಿದರು.

ರಾಜ್ಯಕ್ಕೆ ಕಾಂಗ್ರೆಸ್‌ ಏನು ಮಾಡಿದೆ ಎನ್ನುವುದು ಪ್ರಧಾನ ಅಲ್ಲ. ದೇಶದ ಲ್ಲಿಯೇ ಅತ್ಯಂತ ಭ್ರಷ್ಟ ಸರಕಾರದ ನೇತೃತ್ವದ ವಹಿಸಿರುವ ಕೆ.ಚಂದ್ರ ಶೇಖರ ರಾವ್‌ ಅವರು ಇದುವರೆಗೆ ತೆಲಂಗಾಣಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಜನರಿಗೆ ವಿವರಿಸಿ ಹೇಳಲಿ ಎಂದು ರಾಹುಲ್‌ ಗಾಂಧಿ ಸವಾಲು ಹಾಕಿ ದ್ದಾರೆ. ತೆಲಂಗಾಣದಲ್ಲಿ ಹತ್ತು ವರ್ಷಗಳಲ್ಲಿ 8 ಸಾವಿರ ರೈತರು ಆತ್ಮಹತ್ಯೆ ಮಾಡಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವಾಲಯಗಳೆ ಲ್ಲವೂ ಕೆಸಿಆರ್‌ ಕುಟುಂಬದ ಸದಸ್ಯರ ಬಳಿ ಇದೆ’ ಎಂದು ಆರೋಪಿಸಿದರು.

ರಾಹುಲ್‌ ಎದುರು ಹಾಡಿದ 80ರ ವೃದ್ಧೆ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರದ ವೇಳೆ 80 ವರ್ಷದ ವೃದ್ಧೆ ಹಾಡಿದ ಘಟನೆ ನಡೆದಿದೆ. ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ ಬಗ್ಗೆ ಅವರೇ ಬರೆದ ಹಾಡು ಅದಾಗಿತ್ತು. ಖುದ್ದು ರಾಹುಲ್‌ ಅವರೇ ವೃದ್ಧೆಗೆ ಪ್ರೋತ್ಸಾಹ ನೀಡಿದ್ದಾರೆ. ಈ ಸಂದರ್ಭದಲ್ಲಿ ಜನರು ಜೋರಾಗಿ ಚಪ್ಪಾಳೆ ತಟ್ಟಿದರು.

Advertisement

Udayavani is now on Telegram. Click here to join our channel and stay updated with the latest news.

Next