Advertisement

National Awards;70 ವರ್ಷದಲ್ಲಿ ಕನ್ನಡಕ್ಕೆ ಸಿಕ್ಕಿದ್ದು ನಾಲ್ಕೇ ಅತ್ಯುತ್ತಮ ನಟ ಪ್ರಶಸ್ತಿ!

07:07 PM Aug 16, 2024 | Team Udayavani |

ಹೊಸದಿಲ್ಲಿ: ಚಲನಚಿತ್ರ ರಂಗದಲ್ಲೇ ಉನ್ನತ ಸ್ಥಾನದ ಪ್ರಶಸ್ತಿಯಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ (ಆ.16) ಘೋಷಿಸಲಾಗಿದೆ. ಭಾರತೀಯ ಚಲನಚಿತ್ರ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕನ್ನಡ ಚಿತ್ರ ʼಕಾಂತಾರʼಕ್ಕಾಗಿ ನಟ ರಿಷಬ್ ಶೆಟ್ಟಿ (Rishab Shetty) ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

Advertisement

70 ವರ್ಷಗಳ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತಿಹಾಸದಲ್ಲಿ ಕನ್ನಡ ರಂಗಕ್ಕೆ ಸಿಕ್ಕಿದ 4ನೇ ಅತ್ಯುತ್ತಮ ನಟ ಪ್ರಶಸ್ತಿಯಾಗಿದ್ದು, ಹತ್ತು ವರ್ಷಗಳ ಬಳಿಕ ಕನ್ನಡ ಚಲನಚಿತ್ರ ರಂಗವು ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ರಿಷಬ್‌ ಶೆಟ್ಟಿ ಅವರಿಗಿಂತ ಮೊದಲು ಮೂವರು ಕನ್ನಡ ಚಿತ್ರದ ನಟರು ಈ ಪ್ರಶಸ್ತಿಯನ್ನು ಪಡೆದಿದ್ದು, ಅದರ ವಿವರ ಇಲ್ಲಿದೆ.

ಎಂ.ವಿ ವಾಸುದೇವ ರಾವ್ (1975)

ಮೂಡಬಿದಿರೆ ವೆಂಕಟ ರಾವ್ ವಾಸುದೇವ ರಾವ್‌ (ಎಂ.ವಿ ವಾಸುದೇವ ರಾವ್)‌ 1928ರಲ್ಲಿ ಬಾಲನಟನಾಗಿ ಚಲನಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ. ಕನ್ನಡದ ಹಿಂದಿನ ಮೇರು ಚಿತ್ರಗಳಲ್ಲಿ ಒಂದಾದ ʼಚೊಮನ ದುಡಿʼ ಎಂಬ ಚಿತ್ರದಲ್ಲಿ ಮೂಲಕ ಚೋಮ ಎಂಬ ಪಾತ್ರದಲ್ಲಿ ಅಭಿನಯಿಸಿ, ತನ್ನ ನಟನೆಯಿಂದಾಗಿ ಕನ್ನಡ ಚಲನ ಚಿತ್ರ ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಅಂದರೆ 1975 ರಲ್ಲಿ 23ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿದರು.

Advertisement

ಚಾರುಹಾಸನ್‌ ಶ್ರೀನಿವಾಸನ್‌ (1986)

ಚಾರುಹಾಸನ್‌ ಶ್ರೀನಿವಾಸನ್‌ ಭಾರತದ ಚಿತ್ರರಂಗದಲ್ಲಿ ಓರ್ವ ನಟನಾಗಿ, ನಿರ್ದೇಶಕನಾಗಿ, ಜೊತೆಗೆ ವಕೀಲ ವೃತ್ತಿಯಲ್ಲಿಯೂ ಕೂಡ ಹೆಸರಾದವರು. ಇವರು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ ʼತಬರನ ಕಥೆʼ ಎಂಬ ಕನ್ನಡ ಚಿತ್ರದಲ್ಲಿ ನಟಿಸಿ 1986ರಲ್ಲಿ ಎರಡನೇ ಬಾರಿಗೆ ಕನ್ನಡಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಜೊತೆಗೆ ತನ್ನ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಗೆದ್ದಿದ್ದರು.

ಸಂಚಾರಿ ವಿಜಯ್‌ (2014)

ಸಂಚಾರಿ ವಿಜಯ್‌ ಎಂದೇ ಖ್ಯಾತಿ ಹೊಂದಿದ ವಿಜಯ್‌ ಕುಮಾರ್‌ ಬಸವರಾಜಯ್ಯ ರಂಗನಟನಾಗಿ ತನ್ನವೃತ್ತಿ ಜೀವನವನ್ನು ಪ್ರಾರಂಭಿಸಿದ ವ್ಯಕ್ತಿ. ಅವರ 10 ವರ್ಷಗಳ ವೃತ್ತಿ ಜೀವನದಲ್ಲಿ 25 ಚಲನ ಚಿತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಬಿ. ಎಸ್‌ ಲಿಂಗದೇವರು ನಿರ್ದೇಶಿಸಿದ ʼನಾನು ಅವನಲ್ಲ ಅವಳುʼ ಎಂಬ ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ ತೆರೆ ಮೇಲೆ ನಟಿಸಿ 2014 ರಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಇದು ಕನ್ನಡಕ್ಕೆ ಲಭಿಸಿದ ಮೂರನೇ ಪ್ರಶಸ್ತಿ. ಜೊತೆಗೆ  ತನ್ನ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್‌ ವಿಮರ್ಶಕರ ಪ್ರಶಸ್ತಿಗೆ ಭಾಜನರಾಗಿದ್ದರು.

ರಿಷಬ್ ಶೆಟ್ಟಿ (2024)

ಕಾಂತಾರ ಎಂಬ ಹೆಸರು ಕೇಳುತ್ತಲೇ ನೆನಪಾಗುವ ಹೆಸರು ರಿಷಬ್ ಶೆಟ್ಟಿ.  ಕನ್ನಡ ಚಲನಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ ನಟ – ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ತೆರೆಯ ಮೇಲಿನ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೆಲಸ ಮಾಡಿ ಇದೀಗ ಕಾಂತಾರ ಚಿತ್ರದಲ್ಲಿನ ನಟನೆಗೆ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next