Advertisement

ತಾ.ಪಂ.ಗೆ ರಾಷ್ಟ್ರ ಪ್ರಶಸ್ತಿ: ಫಲಕ ಸಿಕ್ಕಿತು, ನಗದು ಇನ್ನೂ ಬಂದಿಲ್ಲ.

06:40 AM Aug 13, 2017 | Team Udayavani |

ಪುತ್ತೂರು: ಕೇಂದ್ರ ಸರಕಾರದ ಸಶಕ್ತೀಕರಣ ರಾಷ್ಟ್ರಪ್ರಶಸ್ತಿ ಪುರಸ್ಕೃತವಾದ ಪುತ್ತೂರು ತಾ.ಪಂ.ಗೆ ಪ್ರಶಸ್ತಿಯ ನಗದು 30 ಲಕ್ಷ ರೂ. ಇನ್ನೂ ಬಂದಿಲ್ಲ ! ನಾಲ್ಕು ತಿಂಗಳ ಹಿಂದೆ ಲಕ್ನೋದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿ ಸಮ್ಮುಖದಲ್ಲಿ ಇಲ್ಲಿನ ತಾ.ಪಂ. ಅಧ್ಯಕ್ಷರು, ಕಾರ್ಯ ನಿರ್ವಹಣಾಧಿಕಾರಿ ಪ್ರಶಸ್ತಿ ಫಲಕ, ಪ್ರಮಾಣಪತ್ರ ಪಡೆದಿದ್ದರು. ಆದರೆ ನಗದು ಇದುವರೆಗೆ ಬಂದಿಲ್ಲ.

Advertisement

ಏನಿದು ಪ್ರಶಸ್ತಿ?
2014-15 ನೇ ಸಾಲಿನಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಕೇಂದ್ರ ಸರಕಾರ ಈ ಪ್ರಶಸ್ತಿ ನೀಡುತ್ತಿದೆ. ರಾಜ್ಯದಿಂದ ಆಯ್ಕೆಗೊಂಡ 2 ತಾ.ಪಂ.ಗಳಲ್ಲಿ ಪುತ್ತೂರೂ ಒಂದಾಗಿತ್ತಲ್ಲದೇ, ದ.ಕ. ಜಿಲ್ಲೆಯಲ್ಲಿ ಏಕೈಕ ತಾ.ಪಂ. ಆಗಿತ್ತು. ಪ್ರಶಸ್ತಿಯು 30 ಲಕ್ಷ ರೂ.ನಗದು ಹಾಗೂ ಫಲಕ ಹೊಂದಿತ್ತು.

ಆಯ್ಕೆ ಪ್ರಕ್ರಿಯೆ
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ತಾ.ಪಂ.ಗಳಿಗೆ ಪ್ರಶ್ನಾವಳಿ ನೀಡಲಾಗಿತ್ತು. ಒಟ್ಟು 43 ಪ್ರಶ್ನೆಗಳಿಗೆ ಆನ್‌ಲೈನ್‌ ಮೂಲಕ ಉತ್ತರ ಕಳುಹಿಸಬೇಕಿತ್ತು. ಅದಕ್ಕೆ ಎಫ್‌ವಿಟಿ ಫೀಡ್‌ಬ್ಯಾಕ್‌ ಆಧಾರದಲ್ಲಿ ಅಂಕ ನೀಡಲಾಗಿತ್ತು. ಇದರಲ್ಲಿ ಪುತ್ತೂರು ತಾ.ಪಂ. ಶೇ. 88ರಷ್ಟು ಅಂಕ ಗಳಿಸಿತ್ತು. ರಾಜ್ಯಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಒಟ್ಟು 9 ತಾಲೂಕುಗಳಲ್ಲಿ ಇದೂ ಸೇರಿತ್ತು.

ಪಂಚಾಯತ್‌ರಾಜ್‌ ಇಲಾಖೆ ನಿಯೋಗವು ಉತ್ತರ ನೀಡಿರುವುದು ಸರಿ ಇದೆಯೇ ಎಂಬುದನ್ನು  ತಾ.ಪಂ.ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿತ್ತು. ತಾ.ಪಂ.ಸಮಗ್ರ ವಿವರ ಕೇಂದ್ರಕ್ಕೆ ಕಳುಹಿಸಿದ ಬಳಿಕ, ಕೇಂದ್ರ ತಂಡವೂ ಆಗಮಿಸಿ ಪರಿಶೀಲಿಸಿತ್ತು. ಪ್ರಶಸ್ತಿಗೆ ಪರಿಗಣನೆ
ಆನ್‌ಲೈನ್‌ ಪ್ರಶ್ನಾವಳಿಗಳಲ್ಲಿ ಸ್ಥಾಯೀ ಸಮಿತಿ ರಚನೆ, ಸಾಮಾನ್ಯ ಸಭೆ ನಡೆದ ಸಂಖ್ಯೆ, ನಡೆದ ರೀತಿ, ಸಭಾ ನಡಾವಳಿ ಬರೆದಿಟ್ಟುಕೊಂಡ ರೀತಿ, ಚರ್ಚೆಯಾದ ವಿಷಯಗಳ ವಿಂಗಡಣೆ, ಎಸ್‌ಸಿ-ಎಸ್‌ಟಿ, ಮಹಿಳಾ ಸದಸ್ಯರ ಪಾಲುದಾರಿಕೆ, ಮೂಲ ಸೌಕರ್ಯಗಳ ಅನುಷ್ಠಾನ, ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಶೇ. 100 ಸಾಧನೆ, ಅಭಿವೃದ್ಧಿ ಅನುದಾನ ಮತ್ತು ಸ್ವಂತ ನಿಧಿ ಬಳಕೆ, ವಸತಿ ಯೋಜನೆಗಳ ಯಶಸ್ವಿ ಅನುಷ್ಠಾನ, ಅಧೀನದ ವಿವಿಧ ಇಲಾಖೆಗಳ ಅನುದಾನ ಬಳಸಿಯಶಸ್ವಿ ಅನುಷ್ಠಾನಗೊಳಿಸಿರುವುದು ಇತ್ಯಾದಿ ಅಂಶಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.

ಫಲಕ ಮಾತ್ರ ಸಿಕ್ಕಿತ್ತು
ಎಪ್ರಿಲ್‌ 28ರಂದು ಪ್ರಶಸ್ತಿ ಪ್ರದಾನ ನಡೆದಿತ್ತು. ಅಲ್ಲಿ ಫಲಕ ಮಾತ್ರ ನೀಡಲಾಗಿದ್ದು, 30 ಲಕ್ಷ ರೂ. ನಗದು ಅನಂತರ ಬರಬೇಕಿತ್ತು. ಅದೀಗ ವಿಳಂಬವಾಗಿದ್ದು, ಬಹುಮಾನ ಮೊತ್ತವನ್ನು ಮಾರ್ಗಸೂಚಿ ಪ್ರಕಾರ ನಿರ್ದಿಷ್ಟ ಯೋಜನೆಗಳಿಗೆ ಬಳಸಬೇಕಿದೆ. ಆದರೆ ಹಣ ಬಾರದೇ ಕ್ರಿಯಾ ಯೋಜನೆ ರೂಪಿಸದ ಸ್ಥಿತಿ ನಿರ್ಮಾಣವಾಗಿದೆ. 

Advertisement

ತಾ.ಪಂ ಗೆ ದೊರೆತ ಎರಡನೇ ಪ್ರಶಸ್ತಿ ಇದು. 2008ರಲ್ಲಿ ಪುತ್ತೂರು ತಾ.ಪಂ.ಗೆ ನಿರ್ಮಲ ಗ್ರಾಮ ರಾಷ್ಟ್ರೀಯ ಪ್ರಶಸ್ತಿ ಮತ್ತು 1995-96 ರಲ್ಲಿ ರಾಜ್ಯ ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅತ್ಯುತ್ತಮ ತಾ.ಪಂ. ಪ್ರಶಸ್ತಿ ಲಭಿಸಿತ್ತು.

ನಗದು ಬಂದಿಲ್ಲ 
ಕೇಂದ್ರ ಸರಕಾರ ಕೊಡ ಮಾಡುವ ಪ್ರಶಸ್ತಿ ಇದಾಗಿದ್ದು, 30 ಲಕ್ಷ ರೂ. ರಾಜ್ಯ ಸರಕಾರಕ್ಕೆ ಬಂದು ಅನಂತರ ತಾ.ಪಂ.ಗೆ ಬರಲಿದೆ. ಈ ತನಕ ಬಂದಿಲ್ಲ. ಅ.2 ರಂದು ದೊರೆಯುವ ಸಾಧ್ಯತೆ ಇದೆ. ಹಣ ಬಂದ ಬಳಿಕ ಗೈಡ್‌ಲೈನ್ಸ್‌ ಆಧಾರದಲ್ಲಿ ಬಳಕೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗುವುದು.
ಜಗದೀಶ್‌ ಎಸ್‌., ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next