ಕುಮಟಾ: ಇಲ್ಲಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ(ಸಿಂಡ್ ಆರ್‌ಸೆಟಿ)ಯು ಉತ್ತಮ ಕಾರ್ಯನಿರ್ವಹಣೆ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ ಎಂದು ಸಂಸ್ಥೆ ನಿರ್ದೇಶಕ ನವೀನಕುಮಾರ ಎ.ಟಿ. ತಿಳಿಸಿದರು.
ಸುದ್ದಿಗಾರರೊಂದಿಗೆ ಪ್ರಶಸ್ತಿ ಲಭಿಸಿದ ಕುರಿತು ಗುರುವಾರ ಮಾಹಿತಿ ಹಂಚಿಕೊಂಡ ಅವರು, ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತವಾಗಿ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಒಟ್ಟೂ 16 ತರಬೇತಿ ಕೇಂದ್ರಗಳ ಪೈಕಿ ಕುಮಟಾದ ತರಬೇತಿ ಕೇಂದ್ರವು ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಫಲಿತಾಂಶ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಪಿಎಸ್ ಸಿಡಿ ವಿಭಾಗ ಮುಖ್ಯಸ್ಥ ಮೋಹನ ರೆಡ್ಡಿ, ಮೆನೆಜಿಂಗ ಡೈರೆಕ್ಟರ್ ಮೆಲ್ವಿನ್ ರೆಗೋ, ಜನರಲ್ ಮೆನೆಜರ್ ರಾವ್‌ರಿಂದ ಪ್ರಶಸ್ತಿ ಪಡೆದುಕೊಂಡಿರುವುದಾಗಿ ತಿಳಿಸಿದರು.
ಇಲ್ಲಿ ಪ್ರತಿವರ್ಷ ಸಾವಿರಾರು ಮಂದಿ ತರಬೇತು ಪಡೆಯುತ್ತಿದ್ದು ತರಬೇತು ಪಡೆದವರಲ್ಲಿ 845 ಮಂದಿ ಸ್ವ ಉದ್ಯೋಗ ಆರಂಭಿಸಿದ್ದಾರೆ. 524 ಮಂದಿ ಬ್ಯಾಂಕು, ಹಣಕಾಸು ಸಂಸ್ಥೆಗಳಿಂದ ಹಣಕಾಸು ಸಹಾಯ ಪಡೆದು ಸ್ವ ಉದ್ಯೋಗ ಆರಂಭಿಸಿದ್ದಾರೆ. ಈ ಪೈಕಿ 359 ಮಂದಿ ಮಹಿಳೆಯರು ಹಾಗೂ632 ಮಂದಿ ಬಿಪಿಎಲ್ ವರ್ಗದವರು ಎಂದರು.
ತರಬೇತಿ ಕಾರ್ಯಕ್ರಮಗಳ ಜೊತೆಗೆ ಇಲ್ಲಿ 139 ಮಾಹಿತಿ-ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದ್ದೇವೆ. ಎಚ್ ಐವಿ ಸಂತ್ರಸ್ತ ಮಹಿಳೆಯರಿಗೆ ಅಗತ್ಯ ಕಾರ್ಯಕ್ರಮಗಳನ್ನು ಮಾಡಿ ನೆರವು ನೀಡಿದ್ದೇವೆ. ಸಂಸ್ಥೆಯ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ನೆರೆಯ ಶಿವಮೊಗ್ಗ, ಸಾಗರ, ಕಲಘಟಗಿ, ಹಾವೇರಿ, ಶಿಗ್ಗಾವಿ ಮುಂತಾದ ಕಡೆಗಳಿಂದಲೂ ಹೆಚ್ಚಿನ
ಸಂಖ್ಯೆಯ ನಿರುದ್ಯೋಗಿಗಳಿಗೆ ತರಬೇತು ನೀಡಿದೆ ಎಂದರು. ಸಿಂಡ್‌ಆರ್‌ಸೆಟಿಯ ಉಪನ್ಯಾಸಕರಾದ ಗೌರೀಶ ನಾಯ್ಕ, ಮಮತಾ ನಾಯ್ಕ, ಕಾರ್ಯಾಲಯ ಸಹಾಯಕ ಪ್ರಶಾಂತ ನಾಯ್ಕ ಇದ್ದರು.