Advertisement

ಭೀಮಣ್ಣ ಖಂಡ್ರೆಗೆ ರಾಷ್ಟ್ರೀಯ ಪುರಸ್ಕಾರ

04:21 PM Oct 20, 2018 | Team Udayavani |

ಬಸವಕಲ್ಯಾಣ: ಗೊತ್ತಿಲ್ಲದ ಸಂಗತಿಗಳು ಅನುಭವದಿಂದ ಮಾತ್ರ ತಿಳಿಯುತ್ತವೆ. ಹೀಗಾಗಿ ವಿಶ್ವಗುರು ಬಸವಣ್ಣ ಅನುಭವ ಮಂಟಪ ಸ್ಥಾಪಿಸಿದ್ದರು ಎಂದು ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಚಾಕೂರಕರ್‌ ಹೇಳಿದರು.

Advertisement

ಬಿಕೆಡಿಬಿ ಸಭಾಭವನದಲ್ಲಿ ಅಖೀಲ ಭಾರತ ಹರಳಯ್ಯ ಪೀಠ ಹಮ್ಮಿಕೊಂಡ ಶರಣ ವಿಜಯೋತ್ಸವ ನಾಡಹಬ್ಬ ಮತ್ತು 39ನೇ ಹುತಾತ್ಮ ದಿನಾಚರಣೆಯ ಎಂಟನೇ ದಿನ ನಡೆದ ಕಲ್ಯಾಣ ಕ್ರಾಂತಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಅವರಿಗೆ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು. 

ಅನುಭವ ಮಂಟಪದಲ್ಲಿ ಕೇವಲ ದೇಶದ ಜನರು ಮಾತ್ರ ಭಾಗಿಯಾಗಲಿಲ್ಲ. ವಿದೇಶಿಗರೂ ಭಾಗವಹಿಸಿದ್ದರು. ಇಲ್ಲಿ ಸತ್ಯ, ಅಹಿಂಸೆ, ಶಾಂತಿ ಕುರಿತು ಚರ್ಚೆ ನಡೆಯುತ್ತಿತ್ತು. ಆದರೆ ಈಗಲೂ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕೆಲಸವಾಗುತ್ತಿಲ್ಲ. ತಾಪಂ, ಜಿಪಂ, ಗ್ರಾಪಂನಲ್ಲಿ ಮೀಸಲಾತಿಯನ್ನು ರಾಜೀವ ಗಾಂಧಿ ಜಾರಿಗೆ ತಂದಿದ್ದರು. ಆ ಸಂದರ್ಭದಲ್ಲಿ ನಾನು ಸಮಿತಿ ಸದಸ್ಯನಾಗಿದ್ದಾಗ ಒಬ್ಬರು ಲೋಕಸಭೆಯಲ್ಲಿ ಮಹಿಳೆಯರಿಗೆ ಯಾಕೆ ಮೀಸಲಾತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ, ಎರಡು ವರ್ಷಗಳ ನಂತರ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೆ ಈ ವರೆಗೂ ಮೀಸಲಾತಿ ಜಾರಿ ಮಾಡಿಲ್ಲ. ಇದಕ್ಕೆ ರಾಜಕೀಯ ಸ್ವಾರ್ಥವೇ ಪ್ರಮುಖ ಕಾರಣ. ಅಲ್ಲದೇ ವಿಶ್ವಗುರು ಬಸವಣ್ಣನವರು ಮಹಿಳೆಯರಿಗೆ 12ನೇ ಶತಮಾನದಲ್ಲಿ ಸಮಾನತೆ ಹಕ್ಕು ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.

ಹಿರಿಯ ಮುತ್ಸದ್ಧಿ, ಲೋಕ ನಾಯಕ ಭಿಮಣ್ಣಾ ಖಂಡ್ರೆ ಸಮಾನತೆ, ಬಡವರ ಅಭಿವೃದ್ಧಿಗಾಗಿ ಶ್ರಮಿಸಿದವರು. ಅವರಿಂದ ನಾವು ಸಾಕಷ್ಟು ಕಲಿಯುವುದಿದೆ ಎಂದರಲ್ಲದೇ, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸಹಕಾರ ಮತ್ತು ಬೆಂಬಲ ವಿದೆ ಎಂದು ಭರವಸೆ ನೀಡಿದರು. ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ನನ್ನ ಜೀವನದಲ್ಲಿ ಸಾಧನೆ ಮಾಡಿದ ಶ್ರೇಯಸ್ಸು ಭೀಮಣ್ಣಾ ಖಂಡ್ರೆ ಅವರಿಗೆ ಸಲ್ಲುತ್ತದೆ. ನೂತನ ಅನುಭವ ಮಂಟಪ ಕಾಮಗಾರಿ ದೊಡ್ಡ ಯೋಜನೆಯಾಗಿದೆ. ಆದ್ದರಿಂದ ಅದನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ-ಸಿದ್ಧಾಂತಗಳ ಪ್ರಚಾರ ಬೆಳೆಯುವುದಕ್ಕೆ ಚನ್ನಬಸವ ಪಟ್ಟದ್ದೇವರು, ಭೀಮಣ್ಣಾ ಖಂಡ್ರೆ ಕಾರಣ. ಬಡವರು, ದಲಿತರು ಮತ್ತು ಸಂತರ ನಡುವೆ ಅವರ ಜೀವನ ನಡೆದಿದೆ ಎಂದು ಹೇಳಿದರು. 

Advertisement

ಹರಳಯ್ಯನವರ ಗುಹೆಯ ಡಾ| ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿದರು. ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು, ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಮಹಾರಾಷ್ಟ್ರದ ಔಸಾ ತಾಲೂಕಿನ ಶಾಸಕ ಬಸವರಾಜ ಪಾಟೀಲ ಮುರುಮ, ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ, ನಗರಸಭೆ ಅಧ್ಯಕ್ಷ ನೂರಅಜರ್‌ಅಲಿ ನೌರಂಗ, ಬಸವರಾಜ ಬಾಲಿಕಿಲೆ, ಶಿವರಾಜ ನರಶೆಟ್ಟಿ, ಬಸವರಾಜ ಸ್ವಾಮಿ, ಶಶಿಕಾಂತ ದುರ್ಗೆ,
ಮುಂಬೈ ಸಾರಿಗೆ ಅಧಿಕಾರಿ ಸಂಜುಕುಮಾರ ವಾಡೇಕರ್‌ ಮತ್ತಿತರರು ಇದ್ದರು.

ಬೆಳಗ್ಗೆ 770 ಅಮರ ಗಣಂಗಳಿಂದ ಸಾಮೂಹಿಕ ಇಷ್ಟಲಿಂಗ ಯೋಗ ಮತ್ತು ಮಧ್ಯಾಹ್ನ 2:30ಕ್ಕೆ ಅಮೃತ ಪಾತ್ರೆ ಮೆರವಣಿಗೆ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next