ಹುಬ್ಬಳ್ಳಿ: ನಗರದ ‘ಆ್ಯಂಪ್‌ವರ್ಕ್ ಪ್ರೈವೇಟ್ ಲಿಮಿಟೆಡ್’ ರಾಷ್ಟ್ರಮಟ್ಟದ ‘ಉದಯೋನ್ಮುಖ ಕಂಪೆನಿ’ ಪ್ರಶಸ್ತಿಗೆ ಭಾಜನವಾಗಿದೆ. ನವದೆಹಲಿಯಲ್ಲಿ ಇತ್ತೀಚಿಗೆ ಭಾರತೀಯ ಸಾಧಕರ ವೇದಿಕೆ(ಇಂಡಿಯನ್ ಅಚೀವರ್ ಫೋರಂ) ಆಯೋಜಿಸಿದ್ದ 48ನೇ ಇಂಡಿಯಾ-ಇಂಟರ್ ನ್ಯಾಷನಲ್ ಬ್ಯುಸಿನೆಸ್ ಸಮ್ಮೇಳನದಲ್ಲಿ ಕಂಪೆನಿಯ ಸಿಇಒ ಅನಿಲ್ ಪ್ರಭು ಅವರು ಕೇಂದ್ರ ಎಂಎಸ್‌ಎಂಇ ಸಹಾಯಕ ಸಚಿವ ಪ್ರತಾಪ ಚಂದ್ರ ಸಾರಂಗಿ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. ಡಿಜಿಟಲ್ ಇಂಡಿಯಾ ಹಾಗೂ ವಿದ್ಯಾರ್ಥಿ ವಲಯದಲ್ಲಿ ಉದ್ಯಮಶೀಲತಾ ವಾತಾವರಣ ತರಲು ಸಂಸ್ಥೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ‘ಆ್ಯಂಪ್‌ವರ್ಕ್’ ಸಾಫ್ಟ್‌ವೇರ್ ಸಂಸ್ಥೆಯಾಗಿದ್ದು ಐಒಟಿ, ಇಂಡಸ್ಟ್ರಿ 4.0, ಎಐ ಹಾಗೂ ಎಂಎಲ್ ತಂತ್ರಜ್ಞಾನ ಕಾರ್ಯ ಮಾಡುತ್ತಿದೆ. ಈವರೆಗೆ ಸೋಡೆಮಾಥಾ, ಏಷಿಯಾ ಫೌಂಡೇಶನ್, ಬಾರಿಕ್ ಇಂಟರ್‌ನ್ಯಾಷನಲ್, ಬಿಆರ್ ಲೈಫ್ ಹಾಸ್ಪಿಟಲ್ ಸೇರಿ ವಿವಿಧ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದೆ. ಅಲ್ಲದೇ ಹುಬ್ಬಳ್ಳಿಯ ನಾಕ್‌ಡಯಾಬಿಟಿಸ್, ಜಸ್ಟ್ ಹುಬ್ಬಳ್ಳಿ, ಚೇತನ್ ಬಿಸ್ಕೂಲ್, ಯೋಗ 360 ಮೊದಲಾದ ಸಂಸ್ಥೆಗಳಿಗೆ ತಂತ್ರಜ್ಞಾನ ಸಹಕಾರ ನೀಡುತ್ತಿದೆ. ಬೆಂಗಳೂರಿನ ದಯಾನಂದಸಾಗರ, ಕೆಎಲ್ಇ ಐಟಿ ಹಾಗೂ ಕುಂದಾಪುರದ ಎಂಐಟಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೂ ಒಡಂಬಡಿಕೆ ಮಾಡಿಕೊಂಡಿದೆ.