Advertisement
ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೂಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರುವಾರ ಸಂಸತ್ತಿನಲ್ಲಿ ಮಾತನಾಡುವಾಗ ಗಾಂಧೀಜಿಯನ್ನು ಹತ್ಯೆ ಮಾಡಿರುವ ನಾಥೂರಾಂ ಗೋಡ್ಸೆಯನ್ನು “ದೇಶ ಭಕ್ತ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾದ ವಿಷಯ. ವಿಪಕ್ಷಗಳು ಭಾರೀ ಪ್ರತಿಭಟನೆ ನಡೆಸಿದ ಬಳಿಕ ಪ್ರಜ್ಞಾ ತನ್ನ ಹೇಳಿಕೆಗೆ ಕ್ಷಮೆ ಯಾಚಿಸುವುದರೊಂದಿಗೆ ಸದ್ಯಕ್ಕೇನೋ ಈ ವಿವಾದ ತಣ್ಣಗಾಗಬಹುದು. ಆದರೆ ಈ ಮಾದರಿಯ ಘಟನೆಗಳು ಇಲ್ಲಿಗೆ ಮುಗಿಯಬಹುದು ಎಂದು ಹೇಳುವಂತಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಮಾತು ಮತ್ತು ಕೃತಿಯಲ್ಲಿ ಘನತೆಯನ್ನು ಕಳೆದುಕೊಂಡಾಗಲೆಲ್ಲ ಇಂಥ ವಿವಾದಗಳು ಭುಗಿಲೇಳುತ್ತಾ ಇರುತ್ತವೆ.
Related Articles
Advertisement
ಹಿಂದಿನ ಅವಧಿಯಲ್ಲೂ ನಾಯಕರ ಲಗಾಮಿಲ್ಲದ ಮಾತುಗಳಿಂದ ಪಕ್ಷ ಮತ್ತು ಸರಕಾರ ಅನೇಕ ಸಲ ಮುಜುಗರದ ಪ್ರಸಂಗಗಳನ್ನು ಎದುರಿಸಿತ್ತು. ಈ ಪೈಕಿ ಕೆಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. ಉಳಿದವರು ಮೋದಿಯ ಕಟ್ಟುನಿಟ್ಟಿನ ಸೂಚನೆಗಳನ್ನನುಸರಿಸಿ ತಮ್ಮ ನಾಲಗೆಗೆ ಲಗಾಮು ಹಾಕಿಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಈ ಮಾದರಿಯ ವಿವಾದಗಳು ಕಡಿಮೆಯಾಗಿರುವುದನ್ನು ಗಮನಿಸಬಹುದು. ಆದರೆ ಪ್ರಜ್ಞಾ ಸಿಂಗ್ ಒಬ್ಬರೇ ಈಗ ವಿವಾದಗಳಿಗೆ ಕಾರಣವಾಗುತ್ತಿದ್ದಾರೆ. ಪ್ರಜ್ಞಾ ಇನ್ನೂ ಯುವ ಸಂಸದೆ. ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಇದು ಸಾಧ್ಯವಾಗಬೇಕಾದರೆ ಅವರು ತಮ್ಮ ಮಾತುಗಳಿಗೆ ಸಂಯಮದ ಲಗಾಮು ತೊಡಿಸಬೇಕು. ಸಂಸತ್ತಿನಲ್ಲಿ ಮಾತನಾಡುವುದು ಬೇರೆ, ಸಂಸತ್ತಿನ ಹೊರಗೆ ಮಾತನಾಡುವುದು ಬೇರೆ ಎಂಬ ಪ್ರಜ್ಞಾವಂತಿಕೆ ಅವರಿಗಿರಬೇಕು. ಪ್ರಜ್ಞಾ ಸಿಂಗ್ ಎಂದಲ್ಲ ಸಂಸತ್ತಿನಂಥ ಘನವೆತ್ತ ಸ್ಥಳದಲ್ಲಿ ಪ್ರತಿಯೊಂದು ಶಬ್ದವನ್ನೂ ಅಳೆದು ತೂಗಿ ನೋಡಿ ಆಡಬೇಕು. ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ರಕ್ಷಣಾ ಸಮಿತಿಯಿಂದ ಕೊಕ್ ಕೊಟ್ಟದ್ದು ಬರೀ ಲಘು ಶಿಕ್ಷೆಯಾಯಿತು. ಬಿಜೆಪಿ ನಾಯಕತ್ವ ಇಂಥ ವಿವಾದಗಳು ಪುನರಾವರ್ತನೆಯಾಗುವುದನ್ನು ತಡೆಯಲು ತುಸು ಕಠಿನ ನಿರ್ಧಾರ ಕೈಗೊಳ್ಳುವುದು ಅಗತ್ಯ.
ಇದೇ ವೇಳೆ ಸಂಸದರೊಬ್ಬರನ್ನು ಭಯೋತ್ಪಾದಕಿ ಎಂದು ಕರೆದದ್ದು ಕೂಡ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದ ಕರೆದಷ್ಟೇ ಗಂಭೀರವಾದ ತಪ್ಪು ಆಗುತ್ತದೆ. ಆರೋಪ ಮುಕ್ತಿ ಹೊಂದಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿರುವ ಸಂಸದೆಯನ್ನು ಭಯೋತ್ಪಾದಕಿ ಎನ್ನುವುದು ಪರೋಕ್ಷವಾಗಿ ಅವರನ್ನು ಆರಿಸಿದ ಜನರಿಗೆ ಮಾಡಿದ ಅವಮಾನವೂ ಹೌದು. ಈ ಹೇಳಿಕೆಯನ್ನು ಹಿಂದೆಗೆದುಕೊಳ್ಳುವುದಿಲ್ಲ ಎಂದು ಹೇಳುವುದು ಮೊಂಡುತನವಾಗುತ್ತದೆ. ಮಾನದಂಡ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು.