ಚಿತ್ತಗಾಂಗ್: ಆಫ್ ಸ್ಪಿನ್ನರ್ ನಥನ್ ಲಿಯೋನ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಆಸ್ಟೇಲಿಯ ತಂಡವು ಬಾಂಗ್ಲಾದೇಶ ತಂಡದೆದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯಭೇರಿ ಬಾರಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಯಶಸ್ವಿಯಾಗಿದೆ. ಗೆಲ್ಲಲು 86 ರನ್ ಗಳಿಸುವ ಗುರಿ ಪಡೆದ ಆಸ್ಟ್ರೇಲಿಯ ತಂಡ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಮೊದಲ ಟೆಸ್ಟ್ ಸೋತು ಆಘಾತಕ್ಕೆ ಒಳಗಾಗಿದ್ದ ಆಸ್ಟ್ರೇಲಿಯ ತಂಡ ದ್ವಿತೀಯ ಟೆಸ್ಟ್‌ನಲ್ಲಿ ಎಚ್ಚರಿಕೆಯಿಂದ ಆಡಿತು. ಲಿಯೋನ್ ಮತ್ತು ಬ್ಯಾಟಿಂಗ್‌ನಲ್ಲಿ ಡೇವಿಡ್ ವಾರ್ನರ್ ಅವರ ಶತಕದಿಂದಾಗಿ ಆಸ್ಟ್ರೇಲಿಯ ಮೇಲುಗೈ ಸಾಧಿಸಿತಲ್ಲದೇ ನಾಲ್ಕನೇ ದಿನವೇ ಬಾಂಗ್ಲಾ ಕೆಡಹಿ ಗೆಲುವಿನ ಸಂಭ್ರಮ ಆಚರಿಸಿತಲ್ಲದೇ ಸಮಬಲಗೊಳಿಸಿದ ಸಾಧನೆಯೊಂದಿಗೆ ಸಮಾಧಾನಪಟ್ಟುಕೊಂಡಿತು.
ನಾಲ್ಕನೇ ದಿನದಾಟದ ಎರಡನೇ ಓವರಿನಲ್ಲಿ ಅಂತಿಮ ಆಟಗಾರ ಲಿಯೋನ್ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯ 377 ರನ್ನಿಗೆ ಆಲೌಟಾಯಿತು. ಲಿಯೋನ್ ಆಬಳಿಕ ಮ್ಯಾಜಿಕ್ ದಾಳಿ ನಡೆಸಿ ಬಾಂಗ್ಲಾಕ್ಕೆ ಪ್ರಬಲ ಪ್ರಹಾರ ನೀಡಿದರು. ಲಿಯೋನ್ ದಾಳಿಗೆ ತತ್ತರಿಸಿದ ಬಾಂಗ್ಲಾ ಊಟದ ವಿರಾಮದ ವೇಳೆಗೆ 83 ರನ್ನಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಟೀ ವಿರಾಮದ ಬಳಿಕ 157 ರನ್ನಿಗೆ ಆಲೌಟಾಯಿತು. ಇದರಿಂದಾಗಿ ಆಸ್ಟ್ರೇಲಿಯ ಗೆಲುವು ದಾಖಲಿಸಲು 86 ರನ್ ಗಳಿಸುವ ಅವಕಾಶ ಪಡೆಯಿತು.
ನಾಯಕ ಮುಶ್ಫಿಕರ್ ರಹೀಂ 103 ಎಸೆತ ಎದುರಿಸಿ 31ರನ್ ಹೊಡೆದರು. ಉಳಿದ ಆಟಗಾರರಿಗೆ ಲಿಯೋನ್ ದಾಳಿಯನ್ನು ಎದುರಿಸಲು ಸಾಧ್ಯವಾಗಲೇ ಇಲ್ಲ. 61 ಎಸೆತಗಳಿಂದ 29 ರನ್ ಹೊಡೆದ ಮೊಮಿನುಲ್ ಅವರು ಲಿಯೋನ್‌ಗೆ ಐದನೆಯವರಾಗಿ ಬಲಿಯಾದರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ 60 ರನ್ನಿಗೆ 6 ವಿಕೆಟ್ ಕಿತ್ತ ಲಿಯೋನ್ ಒಟ್ಟಾರೆ ಪಂದ್ಯದಲ್ಲಿ 154 ರನ್ನಿಗೆ 13 ವಿಕೆಟ್ ಕಿತ್ತು ಮಿಂಚಿದರು. ಲಿಯೋನ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.