ಹೊಸ ವರ್ಷದ ಆಗಮನಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ. ಎಲ್ಲರೂ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ಸರಿಯಾಗಿ, ಪಾರ್ಟಿ ಹಾಡೊಂದನ್ನು ಬಿಡುಗಡೆ ಮಾಡೋಕೆ “ನಟಸಾರ್ವಭೌಮ’ ಚಿತ್ರತಂಡ ಇದೀಗ ಅಣಿಯಾಗಿದೆ. ಹೌದು, ಡಿ.30 ರಂದು ಪಾರ್ಟಿ ಸಾಂಗ್ ಇರುವ ಲಿರಿಕಲ್ ವಿಡೀಯೋ ಬಿಡುಗಡೆಯಾಗುತ್ತಿದೆ.
ಯೋಗರಾಜ್‌ಭಟ್ ಅವರು ಬರೆದಿರುವ “ಓಪನ್ ದಿ ಬಾಟಲ್..’ ಎಂಬ ಪಾರ್ಟಿ ಹಾಡು ಪಕ್ಕಾ ಹೊಸ ವರ್ಷಕ್ಕೆ ಸರಿಹೊಂದುವ ಹಾಡಾಗಿದ್ದು, ಅದನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಆ ಹಾಡು ಪಾರ್ಟಿ ಮಾಡೋರಿಗೆ ಸಖತ್ ಜೋಶ್ ಕೊಡುವುದಂತೂ ಗ್ಯಾರಂಟಿ ಎಂಬುದು ನಿರ್ದೇಶಕ ಪವನ್ ಒಡೆಯರ್ ಅವರ ಮಾತು.
ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ “ನಟಸಾರ್ವಭೌಮ’ ಚಿತ್ರದ ಟೀಸರ್‌ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈಗ ಚಿತ್ರತಂಡ, ಹೊಸ ವರ್ಷದ ಆರಂಭಕ್ಕೂ ಮುನ್ನ ಪಾರ್ಟಿ ಸಾಂಗ್ ಬಿಡುಗಡೆ ಮಾಡುತ್ತಿದೆ. ಆ ಹಾಡಿಗೆ ಪುನೀತ್‌ರಾಜಕುಮಾರ್ ಅವರು ಬಾಟಲ್ ಹಿಡಿದು, ಸಖತ್ ಸ್ಟೆಪ್ ಹಾಕುವ ಮೂಲಕ ಕಿಕ್ ಕೊಡುವಂತಹ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.
ಆ ಪಾರ್ಟಿ ಸಾಂಗ್ ಕೇಳಿದವರಿಗೊಂದು ಹೊಸ ಜೋಶ್ ಜೊತೆಗೆ ನಾಲ್ಕು ಹೆಜ್ಜೆ ಹಾಕುವಂತಹ ಹುಮ್ಮಸ್ಸು ಬರುವುದಂತೂ ನಿಜ ಎನ್ನುವ ನಿರ್ದೇಶಕರು, ಆ ಹಾಡಿಗೆ ಮೋಹನ್ ಬಿ.ಕೆರೆ. ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಜಾನಿ ಮಾಸ್ಟರ್ ಆ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಪಾರ್ಟಿ ಮಾಡೋರು, ಯಾವೆಲ್ಲಾ ಹಾಡುಗಳಿಗೆ ಹೆಜ್ಜೆ ಹಾಕಬೇಕು ಅಂತ ಲಿಸ್ಟ್ ರೆಡಿಮಾಡಿಕೊಳ್ಳುತ್ತಿದ್ದಾರೋ, ಆ ಲಿಸ್ಟ್‌ನಲ್ಲಿ “ನಟಸಾರ್ವಭೌಮ’ ಚಿತ್ರದ ಪಾರ್ಟಿ ಸಾಂಗ್ ಕೂಡ ಸೇರಿಸಿಕೊಳ್ಳಲು ಆನುಮಾನ ಬೇಡ ಎಂಬುದು ನಿರ್ದೇಶಕರ ಮಾತು.
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಸಲ ಅವರು ಅಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಿಂದಿನ ಚಿತ್ರಗಳಿಗಿಂತಲೂ ಇಲ್ಲಿ ಭರ್ಜರಿ ಆ್ಯಕ್ಷನ್ ಮತ್ತು ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಚಿತ್ರದಲ್ಲಿ ರಚಿತಾರಾಮ್ ಹಾಗು ಅನುಪಮಾ ನಾಯಕಿಯರಾಗಿ ನಟಿಸಿದ್ದಾರೆ. ಇಮಾನ್ ಅವರ ಸಂಗೀತ, ವೈದಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಅಂದಹಾಗೆ, “ನಟಸಾರ್ವಭೌಮ’ ಚಿತ್ರ ಈಗ ಸೆನ್ಸಾರ್ ಮಂಡಳಿಗೆ ಹೋಗಿದ್ದು, ಈ ವಾರದಲ್ಲಿ ಸೆನ್ಸಾರ್ ಮಂಡಳಿ ಚಿತ್ರ ನೋಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗಣರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.