ನಾಸಿಕ್: ನಾಸಿಕ್‌ನ ಪಂಚವಟಿಯ ಹೀರಾವಾಡಿ ಮೀನಾತಾಯಿ ಠಾಕ್ರೆ ಕ್ರೀಡಾ ಸಂಕುಲದಲ್ಲಿ ಇಂಡಿಯನ್ ಮಾಸ್ಟರ್ ಆ್ಯತ್ಲೆಟಿಕ್ಸ್‌ನ 37ನೇ ನ್ಯಾಷನಲ್ ಮಾಸ್ಟರ್ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್-2017ನಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಅವರು ಚಿನ್ನ, ಕಂಚನ್ನು ಪಡೆದು ವಿಶೇಷ ಸಾಧನೆಗೈದಿದ್ದಾರೆ.
ನಾಸಿಕ್ ಡಿಸ್ಟ್ರಿಕ್ಟ್ ವೆಟರನ್ಸ್ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಆಯೋಜಿತ ಮಾಸ್ಟರ್ ಆ್ಯತ್ಲೆಟಿಕ್ಸ್ ಆಫ್ ಮಹಾರಾಷ್ಟ್ರ ಸಂಸ್ಥೆಯ ವತಿಯಿಂದ ಈ ಕ್ರೀಡೋತ್ಸವವು ಜರಗಿತು. ಶಿವಾನಂದ ಶೆಟ್ಟಿ ಅವರು 35-40 ವರ್ಷದೊಳಗಿನವರ 800 ಮೀ. ಓಟದಲ್ಲಿ ಚಿನ್ನ, 1500 ಮೀ. ಓಟದಲ್ಲಿ ಕಂಚು ಹಾಗೂ 5000 ಮೀ. ಓಟದಲ್ಲಿ ಐದನೇ ಸ್ಥಾನ ಪಡೆದು ತುಳು-ಕನ್ನಡಿಗರಿಗೆ ಕೀರ್ತಿ ತಂದಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ಹರಿಯಾಣ, ತೆಲಂಗಾಣ, ಹರ್ಯಾಣ, ಹೈದರಾಬಾದ್, ಉತ್ತರ ಪ್ರದೇಶ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಸುಮಾರು 17 ರಾಜ್ಯಗಳ ಸುಮಾರು 1500ಕ್ಕೂ ಅಧಿಕ ಕ್ರೀಡಾಳುಗಳು ಪಾಲ್ಗೊಂಡಿದ್ದರು. ಮಾ. 24ರಿಂದ ಮಾ. 26ರವರೆಗೆ ಕ್ರೀಡಾಕೂಟವು ನಡೆಯಿತು. ಶಿವಾನಂದ ಶೆಟ್ಟಿ ಅವರನ್ನು ಮಾಸ್ಟರ್ ಆ್ಯತ್ಲೆಟಿಕ್ಸ್Õ ಆಫ್ ಮಹಾರಾಷ್ಟ್ರ ಇದರ ಮುಂಬಯಿ ವಿಭಾಗದ ಪ್ರಬಂಧಕ ಅಶೋಕ್ ಚವಾಣ್ ಅವರು ಗೌರವಿಸಿದರು.
ನಗರದ ಉತ್ತಮ ಮ್ಯಾರಥಾನ್‌ಪಟುವಾಗಿರುವ ಶಿವಾನಂದ ಶೆಟ್ಟಿ ಅವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟಗಾರರಾಗಿ ಈಗಾಗಲೇ ಹೆಸರು ಮಾಡಿದ್ದು, ಥಾಣೆಯಲ್ಲಿ ಮಾ. 19ರಂದು ನಡೆದ 18 ರಿಂದ 50 ವರ್ಷದೊಳಗಿನವರ 10 ಕಿ. ಮೀ. ಮುಂಬಯಿ ರನ್ ಕಾರ್ನಿವಲ್ ರೇಸ್ ಮ್ಯಾರಥಾನ್‌ನಲ್ಲಿ ನಾಲ್ಕನೇ ಸ್ಥಾನ, ಕಲ್ಯಾಣ್‌ನಲ್ಲಿ ನಡೆದ 21 ಕಿ. ಮೀ. ಮ್ಯಾರಥಾನ್‌ನಲ್ಲಿ 35-45 ವರ್ಷದೊಳಗಿನ ವಿಭಾಗದಲ್ಲಿ 4ನೇ ಸ್ಥಾನವನ್ನು ಪಡೆದಿದ್ದಾರೆ.
ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೋತ್ಸವಗಳಲ್ಲಿ ಪಾಲ್ಗೊಂಡಿರುವ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಎ. 18ರಂದು ನ್ಯೂಜಿಲ್ಯಾಂಡ್‌ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ವರ್ಲ್ಡ್ ಮಾಸ್ಟರ್ ಗೇಮ್ಸ್‌ಗೆ ಆಯ್ಕೆಯಾಗಿರುವ ಅವರು, 800 ಮೀ., 1500 ಮೀ., 5000, 10,000 ಮೀ. ಓಟಗಳಲ್ಲಿ ಅಲ್ಲದೆ 10 ಕಿ. ಮೀ. ಕಂಟ್ರಿರೋಡ್ ರೇಸ್, 21 ಕಿ. ಮೀ. ಆಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ.
ಅವರ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹಲವು ಹೊಟೇಲ್ ಉದ್ಯಮಿಗಳು ಈಗಾಗಲೇ ಸಹಕರಿಸಿದ್ದು, ಹೊಟೇಲ್ ಉದ್ಯಮಿ, ಆಹಾರ್ ವಲಯ ಒಂದರ ಉಪಕಾರ್ಯಾಧ್ಯಕ್ಷ ಮಹೇಶ್ ಕರ್ಕೇರ ಅವರು ಪ್ರಾಯೋಜಕತ್ವವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದ ನಿರೀಕ್ಷೆಯಲ್ಲಿ ಇರುವುದಾಗಿ ಶಿವಾನಂದ ಶೆಟ್ಟಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9571652927 ಈ ನಂಬರನ್ನು ಸಂಪರ್ಕಿಸಬಹುದು. ಅವರು ಮೂಲತಃ ನಿಡ್ಡೋಡಿ ನಂದಬೆಟ್ಟು ವಸಂತ ಶೆಟ್ಟಿ ಮತ್ತು ದೆಪ್ಪುಣಿಗುತ್ತು ಅತಿಕಾರಿಬೆಟ್ಟು ಲೀಲಾವತಿ ಶೆಟ್ಟಿ ದಂಪತಿಯ ಪುತ್ರ.