Advertisement
ಕೆಂಪುಗ್ರಹದ ಅಂಗಳದಲ್ಲಿ ಅಲೆದಾಡುತ್ತಿರುವ ನಾಸಾದ ರೋವರ್ ಈ ಶಬ್ದ ಆಲಿಸುವ ಕೆಲಸವನ್ನು ಮಾಡಿದೆ. ಮಂಗಳನಲ್ಲಿ ಕೆಂಪು ಧೂಳಿನ ಸುಳಿ ಗಾಳಿಯು (ಡಸ್ಟ್ ಡೆವಿಲ್) ರೋವರ್‌ನ ಮೇಲಾ^ಗದಿಂದ ಹಾದು ಹೋಗುತ್ತಲೇ, ಅದರ ಶಬ್ದವನ್ನು ರೋವರ್ ತನ್ನ ಮೈಕ್ರೋಫೋನ್ ಮೂಲಕ ರೆಡ್‌ಹ್ಯಾಂಡ್ ಆಗಿ ಸೆರೆಹಿಡಿದಿದೆ. ಗಂಟೆಗೆ 25 ಮೈಲುಗಳ ವೇಗದಲ್ಲಿ ಬೀಸಿದ ಗಾಳಿಯ ಶಬ್ದ 10 ಸೆಕೆಂಡುಗಳ ಅವಧಿಗೆ ಸೆರೆಯಾಗಿದೆ. ಈ ಆಡಿಯೋವನ್ನು ನಾಸಾ ವಿಜ್ಞಾನಿಗಳು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಕೆಂಪು ಗ್ರಹದ ಸುಳಿಗಾಳಿಯ ಶಬ್ದಕ್ಕೂ, ಭೂಮಿಯಲ್ಲಿನ ಗಾಳಿಯ ಶಬ್ದಕ್ಕೂ ದೊಡ್ಡಮಟ್ಟದ ವ್ಯತ್ಯಾಸವೇನೂ ಕಂಡುಬಂದಿಲ್ಲ. ಆದರೆ, ಮಂಗಳ ಗ್ರಹದಲ್ಲಿ ಗಾಳಿಯ ಒತ್ತಡ ಹೆಚ್ಚು ಬಲಯುತವಾಗಿಲ್ಲದ ಕಾರಣ, ಗಾಳಿಯ ಶಬ್ದವು ಭೂಮಿಗಿಂತ ಕ್ಷೀಣವಾಗಿದೆ. ಮಂಗಳನ ನೆಲದಲ್ಲಿ ಸುಳಿಗಾಳಿಯು ಸಾಮಾನ್ಯ ವಿದ್ಯಮಾನವಾಗಿದೆ. ಆದರೆ, ಅದು ಆಡಿಯೋದಲ್ಲಿ ಸೆರೆಯಾಗಿದ್ದು ಇದೇ ಮೊದಲು. ಸೆಕೆಂಡಿಗೆ ಸುಮಾರು 5 ಮೀಟರ್ ವೇಗದಲ್ಲಿ ಈ ಧೂಳು ಗಾಳಿ ಸಂಚರಿಸಿದೆ. ಪರ್ಸೆವೆರೆನ್ಸ್ ರೋವರ್‌ನಲ್ಲಿ ಅಳವಡಿಸಲಾಗಿರುವ ಮೈಕ್ರೋಫೋನ್ ಸದಾ ಕಾಲ ಆನ್ ಆಗಿರುವುದಿಲ್ಲ. ಕೆಲವು ದಿನಗಳಿಗೊಮ್ಮೆ 3 ನಿಮಿಷಕ್ಕೂ ಕಡಿಮೆ ಅವಧಿಗೆ ಇದನ್ನು ಆನ್ ಮಾಡಲಾಗುತ್ತದೆ. 2021ರ ಸೆ.27ರಂದು ಮೈಕ್ರೋಫೋನ್ ಆನ್ ಆಗಿದ್ದರಿಂದ, ಅದೃಷ್ಟವೆಂಬಂತೆ ಸುಳಿಗಾಳಿಯ ಶಬ್ದವು ಸೆರೆಯಾಗಲು ಸಾಧ್ಯವಾಯಿತು ಎನ್ನುತ್ತಾರೆ ವಿಜ್ಞಾನಿಗಳು.