ವಾಷಿಂಗ್ಟನ್: ಸೌರಮಂಡಲದ ಅತಿ ದೊಡ್ಡ ಗ್ರಹವಾಗಿರುವ “ಗುರು’ವಿನ ವಿಡಿಯೋವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಇತ್ತೀಚೆಗೆ ಹಂಚಿಕೊಂಡಿದೆ. ನಾಸಾದ ಜುನೋ ಉಪಗ್ರಹ ತೆಗೆದಿರುವ ವಿಡಿಯೋ ಅದಾಗಿದೆ.
ಜುನೋ ಉಪಗ್ರಹವು ಬಾಹ್ಯಾಕಾಶದಲ್ಲಿ ಗಂಟೆಗೆ 2,10,000 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಅದು 2022ರ ಏ.9ರಂದು ಗುರು ಗ್ರಹದ ಸಮೀಪದಲ್ಲಿ ಅಂದರೆ 3,200 ಕಿ.ಮೀ. ಅಂತರದಲ್ಲಿ ಸಂಚರಿಸುತ್ತಿತ್ತು. ಆಗ ತೆಗೆದಿರುವ ವಿಡಿಯೋವನ್ನು ಈಗ ಹಂಚಿಕೊಳ್ಳಲಾಗಿದೆ.
ಗುರು ಗ್ರಹದ ಜತೆ ಅದರ ಎರಡು ಉಪಗ್ರಹಗಳಾದ(ಚಂದ್ರ) ಇಯೋ ಮತ್ತು ಯುರೋಪಗಳನ್ನೂ ವಿಡಿಯೋದಲ್ಲಿ ಕಾಣಬಹುದು. ಗುರು ಗ್ರಹವು ಒಟ್ಟಾರೆಯಾಗಿ 53 ಗುರುತಿಸಲ್ಪಟ್ಟಿರುವ ಚಂದ್ರಗಳನ್ನು ಹೊಂದಿದೆ. ಅದಲ್ಲದೆ ಇನ್ನೂ 26 ಚಂದ್ರಗಳಿದ್ದು, ಅವುಗಳ ಗುರುತಿಸುವಿಕೆ ಇನ್ನೂ ಬಾಕಿಯಿದೆ.
ಜುನೋ ಉಪಗ್ರಹವನ್ನು 2011ರ ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಯಿತು. ಉಪಗ್ರಹವು 2016ರ ಜುಲೈನಲ್ಲಿ ಗುರು ಗ್ರಹದ ಕಕ್ಷೆ ತಲುಪಿತು. ಈವರೆಗೆ 41 ಬಾರಿ ಗುರು ಗ್ರಹಕ್ಕೆ ಅತ್ಯಂತ ಸನಿಹದವರೆಗೆ ತಲುಪಿದೆ. ಈ ಉಪಗ್ರಹವು 2025ರವರೆಗೆ ಬಾಹ್ಯಾಕಾಶದಲ್ಲಿ ಸೇವೆಯಲ್ಲಿರಲಿದೆ.