Advertisement

ಛಲ ಬಿಡದ ನಾಯಕ ನಾರಾಯಣರಾವ್‌

06:36 PM Sep 25, 2020 | Suhan S |

ಬೀದರ: ಸಭ್ಯ-ಸೌಮ್ಯ ಸ್ವಭಾವ, ಸದಾ ಕ್ಷೇತ್ರದ ಅಭಿವೃದ್ಧಿಗಾಗಿ ತುಡಿಯುವ ನಿಸ್ವಾರ್ಥ ಮನೋಭಾವ. ಸಾಮಾಜಿಕ ಹೋರಾಟಗಳ ಮೂಲಕವೇ ಹಿಂದುಳಿದ ವರ್ಗಗಳ ನಾಯಕರೆಂದೇ ಗುರುತಿಸಿಕೊಂಡವರು ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್‌.

Advertisement

ತಮ್ಮ 30 ವರ್ಷಗಳ ರಾಜಕೀಯ ಜೀವನದಲ್ಲಿ ವಿಧಾನಸಭೆಗೆ ಪ್ರವೇಶಿಸುವ ಕನಸು ನನಸಾಗಿದ್ದು ಒಮ್ಮೆ ಮಾತ್ರ. ಅದೂ ಪೂರ್ಣಾವಧಿ  ಮುಗಿಸದೇ ಇಹಲೋಕವನ್ನು ತ್ಯಜಿಸಿದ್ದಾರೆ. ಬಿಳಿ ಕುರ್ತಾ-ಧೋತಿ, ಆಗಾಗ ತಲೆ ಮೇಲೆ ಗಾಂಧಿ  ಟೋಪಿ ಧರಿಸುತ್ತಿದ್ದ ಅವರು ಜನರ ಮಧ್ಯೆಯೇ ಬೆಳೆದು ಬಂದ ನಾಯಕ. ಚುನಾವಣೆಯಲ್ಲಿ ಗೆಲ್ಲಲಿ-ಸೋಲಲಿ ಕ್ಷೇತ್ರದ ಜನ, ವಿಶೇಷವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯದವರೊಂದಿಗೆ ಬೆರೆತು ಕಷ್ಟ- ಸುಖಗಳಲ್ಲಿ ಭಾಗಿಯಾಗುತ್ತಿದ್ದವರು. ಬೀದರ ಕ್ಷೇತ್ರದ ಬಸಂತಪುರ ಹುಟ್ಟೂರು ಆಗಿದ್ದರೂ ರಾಜಕೀಯ ಬದುಕು ಕಟ್ಟಿಕೊಂಡಿದ್ದು ಬಸವಣ್ಣನ ಕರ್ಮಭೂಮಿಯಲ್ಲಿ. ಕೋಲಿ (ಕಬ್ಬಲಿಗ) ಸಮಾಜದ ನಾರಾಯಣರಾವ್‌ ಸುಮಾರು ನಾಲ್ಕು ದಶಕಗಳ ನಂತರ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದ ಅವರು 1987ರಲ್ಲಿ ಬೀದರ ತಾಲೂಕಿನ ಚಿಮಕೋಡ್‌ ಕ್ಷೇತ್ರದಿಂದ ಜಿಲ್ಲಾ ಪರಿಷತ್‌ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ್ದರು. ನಂತರ ಸಾಕ್ಷರತಾ ಮಿಷನ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನರ ವಿಶ್ವಾಸ ಗಳಿಸಿದ್ದರು. ಜನಪರ ಹೋರಾಟ, ಸಾಮಾಜಿಕ ಜೀವನದಿಂದ ಮನೆ ಮಾತಾಗಿದ್ದರು. ಚುನಾವಣೆಯಲ್ಲಿ ಯಶ

ಕಡಿಮೆ. ಲಿಂಗಾಯತ ಮತ್ತು ಮರಾಠ ಸಮಾಜದ ಬಾಹುಲ್ಯವುಳ್ಳ ಬಸವಕಲ್ಯಾಣ ಕ್ಷೇತ್ರದಲ್ಲಿ ಸತತ ಎರಡು ಬಾರಿ (ಜನತಾ ಪಕ್ಷ  1984, ಕಾಂಗ್ರೆಸ್‌-2013) ಸ್ಪಧಿ ìಸಿ ಸೋಲುಂಡಿದ್ದರು. ಆದರೆ, ಛಲ ಬಿಡದೆ ಮೂರನೇ ಬಾರಿಗೆ (2018) ಕಾಂಗ್ರೆಸ್‌ನಿಂದಲೇ ಗೆದ್ದು, ವಿಧಾನಸಭೆ ಪ್ರವೇಶಿಸುವ ಕನಸನ್ನು ನನಸು ಮಾಡಿಕೊಂಡರು.

ಗುರುವನ್ನೇ ಮಣಿಸಿದ್ದ ಶಿಷ್ಯ: ಬಸವಣ್ಣನ ಕ್ರಾಂತಿಯ ನೆಲದಲ್ಲಿ ಎರಡು ಬಾರಿ ಮರಾಠಿಗರು ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಎಲ್ಲ ಅವಧಿಗೂ ಲಿಂಗಾಯತ ಅಭ್ಯರ್ಥಿಗಳೇ ಜಯ ಗಳಿಸಿದ್ದರು. ದಳ ಪರಿವಾರದ ಭದ್ರ ಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲಿ ಹಿಂದುಳಿದ ಸಮಾಜದ ನಾಯಕನಾಗಿ ಗೆಲುವು ಸಾಧಿಸುವುದರ ಜತಗೆ ನಾಲ್ಕು ದಶಕಗಳಲ್ಲಿ ಯಶಸ್ಸು ಕಾಣದ ಕಾಂಗ್ರೆಸ್‌ಗೆ ಭದ್ರ ಬುನಾದಿ ಹಾಕಿದ್ದರು. ಇನ್ನೂ ವಿಶೇಷವೆಂದರೆ ಜನತಾದಳದಲ್ಲಿ ತಮಗೆ ಗುರುವಾಗಿದ್ದ ಹಿರಿಯ ರಾಜಕಾರಣಿ ಪಿಜಿಆರ್‌ ಸಿಂಧ್ಯಾ (ಜೆಡಿಎಸ್‌) ಮತ್ತು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ (ಬಿಜೆಪಿ) ಅವರನ್ನು ಮಣಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. 2019ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಕಾಂಗ್ರೆಸ್‌ ಕಟ್ಟಾಳಾಗಿದ್ದರೂ ಎಲ್ಲ ಪಕ್ಷದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹಳ್ಳಿಯಿಂದ ದಿಲ್ಲಿಯವರೆಗೆ ದಿಗ್ಗಜ ನಾಯಕರೊಂದಿಗೆ ಸಂಪರ್ಕ ಸಾಧಿ ಸಿದ್ದ ನಾರಾಯಣರಾವ್‌, ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಜನರ ಸಮಸ್ಯೆ, ಕ್ಷೇತ್ರದ ಬೇಡಿಕೆಗಳನ್ನು ಮುಂದಿಟ್ಟು, ಪರಿಹಾರಕ್ಕೆ ಬೆನ್ನತ್ತುತ್ತಿದ್ದರು. ಕೊರೊನಾ ಸಂಕಷ್ಟದಲ್ಲೂ ಜಿಲ್ಲೆಗೆ ಭೇಟಿ ನೀಡುವ ಸಚಿವರು, ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸುತ್ತಿದ್ದರು. ಕೋವಿಡ್‌ ಲಾಕ್‌ಡೌನ್‌ ವೇಳೆಯೂ ಸಾವಿರಾರು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿ ನೆರವಾಗಿದ್ದರು. ಕೊನೆಗೆ ಹೆಮ್ಮಾರಿ ಕೊರೊನಾದಿಂದಲೇ ಜೀವ ಕಳೆದುಕೊಂಡದ್ದು ದುರಂತ.

Advertisement

ಸಿದ್ದುಗಾಗಿ ಕ್ಷೇತ್ರ ತ್ಯಾಗಕ್ಕೆ ಒಪ್ಪಿದ್ರು :  ಮಾಜಿ ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ಅತ್ಯಾಪ್ತರೆಂದೇ ಗುರುತಿಸಿಕೊಂಡಿದ್ದ ನಾರಾಯಣರಾವ್‌ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರಿಗಾಗಿ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧರಾಗಿದ್ದರು. ಗೆಲುವಿಗಾಗಿ ಸುರಕ್ಷಿತ ಕ್ಷೇತ್ರಗಳ ಹುಡುಕಾಟದಲ್ಲಿದ್ದ ಮಾಜಿ ಸಿಎಂ, ಬಸವಕಲ್ಯಾಣ ಕ್ಷೇತ್ರದತ್ತ ಮನಸ್ಸು ಮಾಡಿದ್ದರು. ರಾಜಕೀಯ ಗುರುವಿಗಾಗಿ ವೇದಿಕೆಯನ್ನು ಸಿದ್ಧಪಡಿಸಲು ಮುಂದಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದತ್ತ ಆಸಕ್ತಿ ವಹಿಸಿದ್ದರಿಂದ ನಾರಾಯಣರಾವ್‌ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು.

“ಅನುಭವ ಮಂಟಪ’ಕ್ಕೆ ಶ್ರಮ :  ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಆಗಬೇಕೆಂಬ ದಶಕಗಳ ಕನಸಿಗೆ ರೆಕ್ಕೆ ಮೂಡಿಸಿದ್ದವರು ನಾರಾಯಣರಾವ್‌. ಸರ್ಕಾರಗಳ ಮೇಲೆ ನಿರಂತರ ಒತ್ತಡದ ಪರಿಣಾಮ 500 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮಂಟಪ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಿಸಿ, 100 ಕೋಟಿ ರೂ. ಹಣ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ಇದಕ್ಕಾಗಿ ನೀಲನಕ್ಷೆಯೂ ಸಿದ್ಧಗೊಂಡಿದೆ

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next