ಕಾಗೆ ತಿಂಡಿಯ ಚೂರೊಂದನ್ನು ಕಚ್ಚಿ ಮರದ ಟೊಂಗೆಯ ಮೇಲೆ ಕುಳಿತು ತಿನ್ನುತ್ತಿತ್ತು. ದಾರಿಯಲ್ಲಿ ಹೋಗುತ್ತಿದ್ದ ನರಿಯೊಂದು ಅದನ್ನು ನೋಡಿ ತಿಂಡಿ ಕಸಿದುಕೊಳ್ಳಬೇಕೆಂದು “ಕಾಗೆಯಣ್ಣಾ ನೀನು ಚೆಂದಾಗಿ ಹಾಡುತ್ತೀಯಂತೆ. ಈಗ ಒಂದು ಹಾಡು ಹೇಳು ನಾನು ಕೇಳಬೇಕು’ ಎಂದಿತು. ಮೊದ್ದು ಕಾಗೆ ಕಾ ಕಾ ಎಂದು ಹಾಡಲು ಮೊದಲುಮಾಡಿತು. ತಿಂಡಿಯ ಚೂರು ಕೆಳಗೆ ಬಿತ್ತು. ನರಿ ಅದನ್ನು ಕಚ್ಚಿಕೊಂಡು ಓಡಿಹೋಯಿತು. ಕಾಗೆ ಪೆಚ್ಚುಮುಖ ಹಾಕಿ ನಿಂತಿತು. ಇದು ಹಳೆಯ ಕಥೆ. ಈಗಲೂ ಅದೇ ನರಿ ಮತ್ತು ಕಾಗೆ ತಿಂಡಿ ತಿನ್ನುತ್ತಿರುವಾಗ ಬಂದು ಹಾಡು ಹೇಳೆಂದಿತು. ನರಿಯ ಮಾತು ಕೇಳಿದ ಕಾಗೆ ಮನೆಯೊಳಗೆ ಹೋಗಿ ತಿಂಡಿಯನ್ನು ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟು, ಒಂದು ಸಿ.ಡಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೊರಗೆ ಬಂತು. “ನರಿಯಣ್ಣಾ, ನನ್ನ ಧ್ವನಿ ತುಂಬಾ ಚೆನ್ನಾಗಿದೆಯೆಂದು ಸರಿಗಮ ಕಂಪೆನಿಯವರು ನನ್ನ ಹಾಡುಗಳ ಸಿ.ಡಿ ಮಾಡಿಸಿದ್ದಾರೆ. ಇದನ್ನು ಮನೆಗೆ ತೊಗೊಂಡು ಹೋಗಿ ಸಿಡಿ ಪ್ಲೇಯರ್‌ಗೆ ಹಾಕಿ ಆರಾಮವಾಗಿ ಕೇಳು. ಈಗ ನಾನು ತಿಂಡಿ ತಿನ್ನಬೇಕು’ ಎಂದು ಹೇಳಿ ರಪ್ಪೆಂದು ಬಾಗಿಲು ಮುಚ್ಚಿ ಮನೆಯೊಳಗೆ ಹೋಯಿತು. ಈಗ ಪೆಚ್ಚಾಗುವ ಸರದಿ ನರಿಯಣ್ಣನದಾಗಿತ್ತು.
ವೀಣಾ ಚಿಂತಾಮಣಿ