Advertisement

ಪುತ್ತೂರು ಒಡೆಯನ ಜಳಕ ಗುಂಡಿ ಹೂಳು ತೆರವು

02:33 PM Apr 03, 2019 | Naveen |

ನರಿಮೊಗರು : ವೀರಮಂಗಲದಲ್ಲಿರುವ ಪುತ್ತೂರು ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನ ಘಟ್ಟ(ಜಳಕದ ಗುಂಡಿ)ದಲ್ಲಿ ಕಲ್ಲು ಮಿಶ್ರಿತ ಮರಳಿನ ದಿಬ್ಬಗಳ ತೆರವು ಕಾರ್ಯ ನಡೆಯುತ್ತಿದ್ದು, ಎ. 1ರಂದು ದೇಗುಲದ ವತಿಯಿಂದ ಪರಿಶೀಲಿಸಲಾಯಿತು.

Advertisement

ಮಹಾಲಿಂಗೇಶ್ವರ ದೇವರ ಜಾತ್ರೆಯ ಕೊನೆಯಲ್ಲಿ ಪುತ್ತೂರಿನಿಂದ 14 ಕಿ.ಮೀ. ದೂರದ ನರಿಮೊಗರು ಗ್ರಾ.ಪಂ. ವ್ಯಾಪ್ತಿಯ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕುಮಾರಧಾರಾ ಹೊಳೆಯಲ್ಲಿ ಜಳಕ ಮಾಡುವುದು ಸಂಪ್ರದಾಯ. ಎ. 17ರಂದು ಬ್ರಹ್ಮರಥೋತ್ಸವ ನಡೆದು, ಎ. 18ರಂದು ಸಂಜೆ ದೇವರ ಅವಭೃತ ಸವಾರಿ ಹೊರಡುತ್ತದೆ. ಎ. 19ರಂದು ವೀರಮಂಗಲಕ್ಕೆ ತಲುಪಿ, ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜಳಕ ನಡೆಯುತ್ತದೆ. ಬಳಿಕ ಕಾಲ್ನಡಿಗೆಯಲ್ಲೇ ಹಿಂದಿರುಗಿ ದೇವಸ್ಥಾನಕ್ಕೆ ಆಗಮಿಸಿ, ಧ್ವಜಾವರೋಹಣ ಜರಗುತ್ತದೆ.

ಈ ವರ್ಷ ಜಳಕದ ಸ್ಥಳದಲ್ಲಿ ಉದ್ಭವಿಸಿರುವ ಕಲ್ಲು ಮಿಶ್ರಿತ ಮರಳಿನ ದಿಬ್ಬಗಳನ್ನು ತೆರವುಗೊಳಿಸುವ ಕುರಿತು ಸ್ಥಳ ವೀಕ್ಷಣೆ ಮಾಡಿ ಚರ್ಚಿಸಲಾಯಿತು. ಮರಳು ತುಂಬಿರುವ ಕುರಿತು ‘ಉದಯವಾಣಿ’ ಸುದಿನ ಮಾ. 10ರಂದು ಸಚಿತ್ರ ವರದಿ ಪ್ರಕಟಿಸಿತ್ತು. ದೇವಸ್ಥಾನದ ವತಿಯಿಂದ ಸ್ಥಳ ಪರಿಶೀಲಿಸಿ, ಕಲ್ಲು ಮಿಶ್ರಿತ ಮರಳನ್ನು ಹಿಟಾಚಿ ಬಳಸಿ ತೆರವು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು.

2 ದಿನಗಳಿಂದ ಕೆಲಸ ಆರಂಭಿಸಲಾಗಿತ್ತು. ಎ. 1ರಂದು ದೇಗುಲದ ವಾಸ್ತು ಎಂಜಿನಿಯರ್‌ ಪಿ.ಜಿ. ಜಗನ್ನಿವಾಸ ರಾವ್‌, ಸಿವಿಲ್‌ ಎಂಜಿನಿಯರ್‌ ರಾಮಚಂದ್ರ ಘಾಟೆ ಸ್ನಾನ ಘಟ್ಟದ ಸುತ್ತಳತೆ ತೋರಿಸಿದಂತೆ ಹಿಟಾಚಿ ಆಪರೇಟರ್‌ ಕಾಮಗಾರಿ ಆರಂಭಿಸಿದ್ದಾರೆ. ದೇಗುಲದ ಕಚೇರಿ ವ್ಯವಸ್ಥಾಪಕ ಜಗದೀಶ್‌ ಪಿ., ನೌಕರ ಪದ್ಮನಾಭ, ನಿತ್ಯ ಕರಸೇವಕ ಗಣೇಶ್‌ ಆಚಾರ್ಯ ಬನ್ನೂರು, ತಮ್ಮಣ್ಣ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next