Advertisement

‘ಅಂಗನವಾಡಿ ಸರ್ವ ಧರ್ಮೀಯರ ದೇಗುಲ’

01:15 AM Dec 25, 2018 | Team Udayavani |

ಬಂಟ್ವಾಳ: ಅಂಗನವಾಡಿ ಸರ್ವಧರ್ಮೀಯರ ಮಕ್ಕಳ ದೇಗುಲ. ನರಿಕೊಂಬು ಗ್ರಾಮ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ದೇವಸ್ಥಾನ, ಭಜನ ಮಂದಿರಗಳು ಇರುವ ಗ್ರಾಮ. ಇಲ್ಲಿ ದೈವಿಕ ಸಂಪತ್ತು ಸಂಪನ್ನವಾಗಿದೆ. ಊರಿನ ಜನರ ಸಹಭಾಗಿತ್ವದಲ್ಲಿ ನಿರ್ಮಿಸಿದ ಇಲ್ಲಿನ ಅಂಗನವಾಡಿ ರಾಜ್ಯಕ್ಕೆ ಮಾದರಿ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ಡಿ. 24ರಂದು ನೂತನ ನರಿಕೊಂಬು ಗ್ರಾ.ಪಂ. ನವಜೀವನ ಅಂಗನವಾಡಿ ಕೇಂದ್ರವನ್ನು ಟೇಪ್‌ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Advertisement

ಸಂಘಟಕರು ಅತ್ಯುತ್ಸಾಹದಿಂದ ಅಂಗನವಾಡಿಗೆ ಹವಾನಿಯಂತ್ರಕ ಸಹಿತ ಎಲ್ಲ ಸೌಲಭ್ಯಗಳನ್ನು ಅನುಷ್ಠಾನಿಸಲು ಸಹಕರಿಸಿದ್ದಾರೆ. ನಿಮ್ಮೆಲ್ಲರ ಶ್ರಮ ಸಾಧನೆ ಪ್ರಯತ್ನಗಳಿಗೆ ಅಭಿನಂದನೆಗಳು. ಊರಿನ ಕೆಲಸದ ಬಗ್ಗೆ ಮುಂದೆಯೂ ಜನರ ಸಹಭಾಗಿತ್ವ ಇದ್ದಾಗ ಯೋಜನೆಗಳು ಯಶಸ್ವಿಯಾಗಿ ನಡೆಯುವುದು ಎಂದು ಶ್ಲಾಘನೆ ವ್ಯಕ್ತಮಾಡಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಅಂಗನವಾಡಿ ಆವರಣದ ಕಾಂಕ್ರಿಟ್‌ ರಸ್ತೆಯನ್ನು ಟೇಪ್‌ ಕತ್ತರಿಸುವ ಮೂಲಕ ಉದ್ಘಾಟಿಸಿ ಲೋಪಾರ್ಪಣೆ ಮಾಡಿ ಶುಭ ಹಾರೈಸಿದರು.

ಜನತೆಯ ಸಹಭಾಗಿತ್ವದಲ್ಲಿ ನಿರ್ಮಾಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ, ಸುಮಾರು 18.50 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ಜನತೆಯ ಸಹಭಾಗಿತ್ವದಲ್ಲಿ ನಿರ್ಮಾಣ ಆಗಿದೆ. ದಾನಿಗಳ ಸಹಯೋಗದಲ್ಲಿ ಸೀಲಿಂಗ್‌ ಫ್ಯಾನ್‌, ಎ.ಸಿ. ಯಂತ್ರಗಳು, ಧ್ವಜಸ್ತಂಭ, ಕಿಟಿಕಿ ಬಾಗಿಲಿನ ಕರ್ಟನ್‌, ಟ್ಯೂಬ್‌ಲೈಟ್‌, ಎಲ್‌ಇಡಿ ಬಲ್ಬ್, ನೇತ್ರಾವತಿ ನರ್ಸರಿ ಅವರಿಂದ ಉಚಿತ ಹಸುರೀಕರಣ, ಗೋಡೆಯ ಪಟ್ಟಿ ಫಿನಿಶ್‌, ಆವರಣಗೋಡೆ, ಒಳಾಂಗಣದಲ್ಲಿ ಸೆಲ್ಫ್, ವರಾಂಡದಲ್ಲಿ ಸುವಾಸನೆ ಬೀರುವ ಹೂಗಿಡಗಳಿಂದ ಅಲಂಕೃತವಾಗಿದೆ. ಗೋಡೆಯು ಬಣ್ಣಬಣ್ಣದ ಚಿತ್ತಾರಗಳಿಂದ ಕಣ್ಮನ ಸೆಳೆಯುವಂತೆ ಮಾಡಲಾಗಿದೆ ಎಂದರು.

1991ರಲ್ಲಿ ಇಲ್ಲಿನ ನವಜೀವನ ವ್ಯಾಯಾಮ ಶಾಲೆ ಆರಂಭವಾಗಿದ್ದು 2018 ಡಿ. 24ರಂದು ಬರೇ ಒಂದು ವರ್ಷ ಮೂರು ತಿಂಗಳಲ್ಲಿ ಎಲ್ಲ ಕೆಲಸಗಳು ನಡೆದಿದೆ. ಒಳಾಂಗಣ, ಹೊರಾಂಗಣ, ಭೋಜನಾಲಯ, ದಾಸ್ತಾನು ಕೊಠಡಿ, ಆಧುನಿಕ ಮಾದರಿ ಅಡುಗೆ ಕೋಣೆ, ಸ್ನಾನಗೃಹ, ಆಂಗ್ಲ ಮಾದರಿ ಮತ್ತು ಸ್ಥಳೀಯ ಮಾದರಿ ಶೌಚಾಲಯ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಟ್ಟಡವು ಐದು ಸೆಂಟ್ಸ್‌ನಲ್ಲಿ 1,180 ಚ.ಅ. ವಿಸ್ತೀರ್ಣ ಹೊಂದಿದೆ. ಅಂಗಳಕ್ಕೆ ಸಂಪೂರ್ಣ ಇಂಟರ್‌ಲಾಕ್‌ ಅಳವಡಿಕೆ ಮಾಡಿದೆ. ಗೋಡೆಯಲ್ಲಿ ವಿವಿಧ ಅಲಂಕಾರಿಕ ಗೋಡೆ ಬರಹದ ಮೂಲಕ ಸಂದೇಶಗಳ ಭಿತ್ತನೆಗೆ ಕ್ರಮ ಕೈಗೊಂಡಿದೆ ಎಂದರು. ಜಿ.ಪಂ. ಉಪಾಧ್ಯಕ್ಷೆ  ಕಸ್ತೂರಿ ಪಂಜ, ಮಾಜಿ ಸಚಿವ ಬಿ. ರಮಾನಾಥ ರೈ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ದ.ಕ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಇ.ಒ. ರಾಜಣ್ಣ ಸಭೆ ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾ.ಪಂ. ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಪಂಚಾಯತ್‌ ರಾಜ್‌ ಸ.ಕಾ.ನಿ. ಇಂಜಿನಿಯರ್‌ ರೋಹಿದಾಸ್‌, ಶ್ರೀ ಸತ್ಯದೇವತಾ ಟ್ರಸ್ಟ್‌ ಅಧ್ಯಕ್ಷ ಲೋಕೇಶ್‌ ಪಿ.ಜೆ., ಗ್ರಾ.ಪಂ. ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಮ್ಮಾನ
ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಹಿರಿಯರಾದ ಲಕ್ಷ್ಮಣ ಸಪಲ್ಯ, ಬಾಲವಿಕಾಸ ಸಮಿತಿ ಅಧ್ಯಕ್ಷ ರವೀಂದ್ರ ಸಪಲ್ಯ, ಪಿಡಿಒ ಶಿವಾನಂದ, ಗುತ್ತಿಗೆದಾರ ಶೈಲೇಶ್‌ ಪೂಜಾರಿ ಕುಚ್ಚಿಗುಡ್ಡೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಮೆಸ್ಕಾಂ ಸ.ಕಾ.ನಿ. ಇಂಜಿನಿಯರ್‌ ನಾರಾಯಣ ಭಟ್‌ರನ್ನು ಸಮ್ಮಾನಿಸಲಾಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷ ರವೀಂದ್ರ ಸಪಲ್ಯ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ಬಳಸುವಾಗ ಎಚ್ಚರ ಇರಲಿ
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಅಂಗನವಾಡಿ ಕಟ್ಟಡಕ್ಕೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಅಳವಡಿಸುವುದಕ್ಕೆ ಕಾನೂನು ಪ್ರಕಾರ ಅನುಮತಿ ಇಲ್ಲ. ಆದರೆ ಸಂಘಟಕರು ಉತ್ಸಾಹದಿಂದ ಮಾಡಿದ್ದಾರೆ. ಅದನ್ನು ಬಳಸುವಾಗ ಜಾಗೃತೆ ಇರಲಿ. ಅನಿವಾರ್ಯ ಸಂದರ್ಭ ಉಪಯೋಗಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಮಕ್ಕಳ ಆರೋಗ್ಯ ಮುಖ್ಯವಾಗಿದ್ದು ಅವರು ಅಂಗನವಾಡಿ ಮತ್ತು ಮುಕ್ತ ವಾತಾವರಣಕ್ಕೂ ಹೊಂದಿಕೊಳ್ಳುವುದು ಅವಶ್ಯವಾದ್ದರಿಂದ ಹೊಸತನದಲ್ಲಿ ಜಾಗೃತೆ ಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next