ಇರಾನ್‌ನಲ್ಲಿನ ಮಹಿಳೆಯರ ಪರವಾಗಿ ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸ್ವಾತಂತ್ರ್ಯ ನೀಡಬೇಕು ಎಂದು ಹೋರಾಟ ನಡೆಸಿ, ಈಗ ಜೈಲುಪಾಲಾಗಿರುವ ಇರಾನಿನ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್‌ನ ಉಪ ನಿರ್ದೇಶಕಿಯಾಗಿರುವ ಇವರು ಸದ್ಯ ಟೆಹರಾನ್‌ನಲ್ಲಿರುವ ಎವಿನ್ ಜೈಲಿನಲ್ಲಿದ್ದಾರೆ. ಈಗಾಗಲೇ 13 ಬಾರಿ ಜೈಲುಶಿಕ್ಷೆಗೆ ಒಳಗಾಗಿರುವ ಇವರನ್ನು 5 ಬಾರಿ ದೋಷಿ ಎಂದು ಘೋಷಿಸಲಾಗಿದೆ. ಒಟ್ಟಾರೆಯಾಗಿ 31 ವರ್ಷಗಳ ಜೈಲು ಶಿಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಇರಾನ್‌ನಲ್ಲಿ 22 ವರ್ಷದ ಯುವಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಇದನ್ನು ವಿರೋಧಿಸಿ ಅಲ್ಲಿ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಇತ್ತೀಚೆಗಷ್ಟೇ ಇವರು ಸಾವಿಗೀಡಾದ ಯುವಕ ಮಹ್ಸಾ ಅಮಿನಿ ಸ್ಮರಣಾರ್ಥ ನಡೆದ ಸ್ಮರಣ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಮಹ್ಸಾ ಸಾವಿನ ಬಳಿಕ ನಡೆದ ಹೋರಾಟಗಳಲ್ಲಿ ಭಾಗಿಯಾಗಿದ್ದ ಮೊಹ್ಮಮದಿ ಮಹಿಳೆಯರ ಜೀವನ, ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದರು.
ಅಂದ ಹಾಗೆ 51 ವರ್ಷದ ಮೊಹಮ್ಮದಿ ಅವರು ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಎಂಜಿನಿಯರ್ ಆಗಿ ಕೆಲಸ ಆರಂಭಿಸಿದ್ದರು. ವಿದ್ಯಾಭ್ಯಾಸದ ಹಂತದಲ್ಲಿಯೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು. ಅಲ್ಲದೆ ಮಹಿಳೆಯರ ಪರವಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ರಾಜಕೀಯ ವಿದ್ಯಾರ್ಥಿ ಗುಂಪುಗಳ ಎರಡು ಸಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಜತೆಗೆ 2009ರಲ್ಲಿ ಎಂಜಿನಿಯರಿಂಗ್ ಹುದ್ದೆಯನ್ನೂ ಕಳೆದುಕೊಂಡರು.
ಜತೆಗೆ ಇರಾನ್‌ನಲ್ಲಿ ಮರಣದಂಡನೆ ತೆಗೆದುಹಾಕಬೇಕು, ಮಹಿಳೆಯರಿಗೂ ಹಕ್ಕು ನೀಡಬೇಕು ಮತ್ತು ಪ್ರತಿಭಟನ ಹಕ್ಕು ನೀಡಬೇಕು ಎಂದು ಆಂದೋಲನ ನಡೆಸಿದ್ದೂ ಅಲ್ಲದೆ ಪತ್ರಕರ್ತೆಯಾಗಿ ಹಲವಾರು ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ. ಮೊಹಮ್ಮದಿ ಅವರನ್ನು 2011ರಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು. ಆಗ ಹೋರಾಟಗಾರರ ಕುಟುಂಬಗಳಿಗೆ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿ ಹಲವಾರು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.
ಮೊಹಮ್ಮದಿ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುತ್ತಿರುವ 19ನೇ ಮಹಿಳೆ. 2003ರಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಶಿರಿನ್ ಎಬಾದಿ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಅಲ್ಲದೆ ಜೈಲಿನಲ್ಲಿರುವವರಿಗೆ 5ನೇ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಮೊಹಮ್ಮದಿ ಅವರಿಗೆ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ದೊರಕಿವೆ. 2009ರಲ್ಲಿ ಅಲೆಕ್ಸಾಂಡರ್ ಲಾಂಗರ್ ಪ್ರಶಸ್ತಿ, ಯುನೆಸ್ಕೋ ವಿಶ್ವ ಪ್ರಸ್ ಫ್ರೀಡಂ ಪ್ರಶಸ್ತಿ, ಅಲೋಫ್ ಪಾಲ್ಮೆ ಪ್ರಶಸ್ತಿಯೂ ಸಿಕ್ಕಿದೆ.