ಬೀದರ: “ಮೋದಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ಹಾಕಿದರೆ ದೇಶಪ್ರೇಮಿ, ಇಲ್ಲದಿದ್ದರೆ ದೇಶ ವಿರೋಧಿ ಎಂಬ ಭಾವನೆಯನ್ನು ಜನರ ಮಧ್ಯೆ ಹರಡಿಸಿ ದೇಶ ವಿಭಜನೆಗೆ ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2004ರ ಲೋಕಸಭೆ ಚುನಾವಣೆ ಫಲಿತಾಂಶ ಈ ಬಾರಿ ಮರುಕಳಿಸಲಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಬರೀ ಸುಳ್ಳುಗಳನ್ನು ಹರಡುವುದು, ದೇಶ ವಿಭಜಿಸುವ ಕೆಲಸ ಮಾತ್ರ ಮಾಡಿದೆ. ರಾಮ ಮಂದಿರ ವಿಷಯದಲ್ಲಿ ದೇಶ ಒಡೆಯುವ ಕೆಲಸ ಮಾಡಿದ್ದು, ಇದೀಗ ದೇಶಪ್ರೇಮ ಹೆಸರಲ್ಲಿ ಚುನಾವಣೆ ನಡೆಸುತ್ತಿದೆ ಎಂದರು.
ನೈಜ ಸಮಸ್ಯೆಗಳಿಂದ ಜನರನ್ನು ವಿಮುಖಗೊಳಿಸಿ ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ಗೆಲ್ಲಲು ಬಿಜೆಪಿಯವರು ಹವಣಿಸುತ್ತಿದ್ದಾರೆ. ದೇಶ ಪ್ರೇಮ ಕೇವಲ ಬಿಜೆಪಿಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಅನೇಕ ಹೋರಾಟ ಮಾಡಿದೆ. ಆದರೆ, ಚುನಾವಣೆಗೆ ಆ ವಿಷಯಗಳನ್ನು ಯಾವತ್ತೂ ಬಳಸಿಕೊಂಡಿಲ್ಲ ಎಂದರು.
ವೀರಶೈವ-ಲಿಂಗಾಯತ ಮುಗಿದ ಅಧ್ಯಾಯ, ಈ ವಿಷಯಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ. ಇದು ಸರ್ಕಾರ ಹಾಗೂ ಆ ಸಮುದಾಯದ ಮುಖಂಡರಿಗೆ ಬಿಟ್ಟಿದ್ದು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ