ಬಂಟ್ವಾಳ: ಮೋದಿಯವರ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿ ಮತಯಾಚನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಮೋದಿ ಒಂದು ವ್ಯಕ್ತಿಯಲ್ಲ ಪರಿಶ್ರಮ ಎಂಬುದನ್ನು ತಿಳಿಯಬೇಕು. ಅವರ ರಾಜಕೀಯ ಸೇವೆಯ 15 ವರ್ಷ ಮುಖ್ಯಮಂತ್ರಿಯಾಗಿ 5 ವರ್ಷ ಪ್ರಧಾನಿಯಾಗಿ ಕಪ್ಪು ಚುಕ್ಕೆ ರಹಿತ ಆಡಳಿತ ನೀಡಿದ್ದಾರೆ. ಅವರ ಎದೆಗಾರಿಕೆ, ವಿಚಾರಧಾರೆ ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1,860 ಬೂತ್‌ಗಳ ಮನೆ ಮನೆ ಪ್ರಚಾರದ ಮೊದಲ ಹಂತ ಮುಕ್ತಾಯ ಆಗಿದೆ. ಬೂತ್ ಮಟ್ಟದ ಕಾರ್ಯಕರ್ತರಿಂದ ಮೂರು ಬಾರಿ ಮತದಾರರನ್ನು ಭೇಟಿಯಾಗುವ ಕೆಲಸ ಆಗುತ್ತದೆ. ನಳಿನ್ ಕುಮಾರ್ ಕಟೀಲು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವರು. ಬಿಜೆಪಿ ನವಭಾರತದ ನಿರ್ಮಾಣ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂದರು.
ಬಿಜೆಪಿ ಪ್ರಣಾಳಿಕೆ ರೈತ ಪರವಾಗಿ, ಭಾರತದ ಭವಿಷ್ಯದ ಬಗ್ಗೆ ಯೋಜನೆ ಹೊಂದಿದ್ದು, ದೇಶ ಭಕ್ತಿಯಿಂದ ಕೂಡಿದೆ. ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಪರವಾದ ಜಂಟಿ ಪ್ರಣಾಳಿಕೆಯಂತಿದೆ. ಸೈನಿಕರ ಸ್ಥೆರ್ಯ ಕುಸಿಯುವಂತೆ ಮಾಡಿರುವ, ದೇಶಭಕ್ತಿ ರಹಿತ ಪ್ರಣಾಳಿಕೆಯಾಗಿದೆ ಎಂದರು.
ಎ. 13: ಪ್ರಧಾನಿ ಮೋದಿ ಮಂಗಳೂರಿಗೆ
ಎ. 13ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುವರು. 1 ಲಕ್ಷಕ್ಕೂ ಹೆಚ್ಚು ಮತದಾರರು ಈ ಸಂದರ್ಭ ಸೇರಲಿದ್ದಾರೆ. ಐದು ಸಾವಿರ ಮಂದಿ ಚೌಕೀದಾರ್ ಪೇಟ ತೊಟ್ಟು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಸಭೆಗೆ ಆಗಮಿಸುವ ಜನರು ಅಪರಾಹ್ನ 3.30ರೊಳಗೆ ಮೈದಾನಕ್ಕೆ ಬಂದು ತಲುಪಬೇಕು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರ್ಯಾಲಿಗೆ ಸಿದ್ಧತೆಗಳು ಆಗುತ್ತಿದೆ. ಬಂಟ್ವಾಳ ಕ್ಷೇತ್ರದಿಂದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ 10 ಸಹಸ್ರ ಮಂದಿ ಭಾಗವಹಿಸುವರು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ವಿಧಾನಸಭಾ ಕೇತ್ರ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಕ್ಷೇತ್ರ ಪ್ರಮುಖ್ ಅಪ್ಪಯ್ಯ ಮಣಿಯಾಣಿ, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಪ್ರ. ಕಾರ್ಯದರ್ಶಿ ಮೋನಪ್ಪ ದೇವಸ್ಯ, ಪ್ರಮುಖರಾದ ದಿನೇಶ್ ಭಂಡಾರಿ, ಯಶೋದರ ಕರ್ಬೆಟ್ಟು, ದೇವಪ್ಪ ಪೂಜಾರಿ, ಪುಷ್ಪರಾಜ ಚೌಟ ಉಪಸ್ಥಿತರಿದ್ದರು. ರಾಮ್‌ದಾಸ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.