Advertisement

ದ್ವೇಷ, ಆತಂಕ ಸೃಷ್ಟಿ ಮೋದಿ ಸಾಧನೆ: ಸುದರ್ಶನ್‌

08:34 AM Apr 06, 2019 | Team Udayavani |

ಮಂಗಳೂರು: ದ್ವೇಷ, ಆತಂಕದ ವಾತಾವರಣ ಸೃಷ್ಟಿಯೇ ಮೋದಿ ಸಾಧನೆಯಾಗಿದ್ದು, ಇದನ್ನು ತೊಡೆದು ಸೌಹಾರ್ದ ಮತ್ತು ಭಾವೈಕ್ಯ ಪರಂಪರೆಯ ರಕ್ಷಣೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಗತ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌. ಸುದರ್ಶನ್‌ ಹೇಳಿದರು.

Advertisement

ಶುಕ್ರವಾರ ಪಕ್ಷದ ಚುನಾವಣ ಪ್ರಣಾಳಿಕೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ, ಪ್ರಸ್ತುತ ಚುನಾವಣೆ ವಿಷಯಗಳ ಆಧಾರದ ಮೇಲೆ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾನಮನಸ್ಕ ಪಕ್ಷಗಳು ಒಟ್ಟಾಗಿ ಬಿಜೆಪಿಗೆ ಸೋಲು ಉಣಿಸುವುದು ಖಚಿತ ಎಂದರು.

ಮೋದಿ ಸರಕಾರ ಜನವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಆಡಳಿತದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಭಯೋತ್ಪಾದನೆ ಹೆಚ್ಚಿದೆ. ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರ ಸರಕಾರದ ನಡುವಣ ಸಂಬಂಧ ಶಿಥಿಲವಾಗಿದೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ ಎಂದ ಅವರು, ಸಂಸತ್ತಿಗೆ ಪ್ರಾಮುಖ್ಯ ನೀಡದ ಮೋದಿ ಜನಸಾಮಾನ್ಯರಿಗೆ ನೀಡಿಯಾರೇ ಎಂದರು.

ಆಧುನಿಕ ಭಾರತ ನಿರ್ಮಾಣ
ಮೋದಿಯವರು ನ್ಯೂ ಇಂಡಿಯಾ ನಿರ್ಮಾಣ ತಮ್ಮ ಗುರಿ ಎನ್ನುತ್ತಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಮಾಡರ್ನ್ ಇಂಡಿಯಾ. ಇದು ಕಾಂಗ್ರೆಸ್‌ ಗುರಿ. ಎಲ್ಲರ ಪ್ರಗತಿ, ಭಾವೈಕ್ಯ ಕಾಂಗ್ರೆಸ್‌ ಸಿದ್ಧಾಂತವಾಗಿದೆ. ಈ ಹಿಂದೆ ಯುಪಿಎ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿತ್ತು. ಈ ಬಾರಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಅನೇಕ ಜನಪರ, ಪ್ರಗತಿಪರ ಭರವಸೆಗಳನ್ನು ನೀಡಿದೆ. ಬಡತನ ನಿರ್ಮೂಲನಕ್ಕೆ ನ್ಯಾಯ್‌, ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಕ್ರಾಂತಿ, ಕೃಷಿ ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳು, ಸಾರ್ವತ್ರಿಕ ಆರೋಗ್ಯ ಸೇವೆ, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ವಿವರಿಸಿದರು.

ರಾಹುಲ್‌ಗಿಂತ ನಳಿನ್‌ ಸಾಧನೆ ದೊಡ್ಡದು ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದ ನಳಿನ್‌ ಸಾಧನೆ ಶೂನ್ಯ. ಇಲ್ಲಿನ ಅಭಿವೃದ್ಧಿ ಕಾರ್ಯಗಳು ರಾಜ್ಯ ಸರಕಾರದಿಂದ ಆಗಿರುವುದು. ರಾಹುಲ್‌ ಗಾಂಧಿ ಜತೆಗೆ ನಳಿನ್‌ ಹೋಲಿಕೆ ಹಾಸ್ಯಾಸ್ಪದ ಎಂದರು.

Advertisement

ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಮಿಥುನ್‌ ರೈ ಅವರ ಚುನಾವಣ ಏಜೆಂಟ್‌ ಸದಾಶಿವ ಉಳ್ಳಾಲ, ಜಿಲ್ಲಾ ವಕ್ತಾರ ಎ.ಸಿ. ವಿನಯರಾಜ್‌, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಕಾರ್ಯದರ್ಶಿ ನಜೀರ್‌ ಬಜಾಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next