Advertisement

ಮೋದಿಗಿಲ್ಲ ಬಡವರ ಕಾಳಜಿ

02:39 PM Mar 30, 2019 | Team Udayavani |

ಚಿಂಚೋಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೃದಯದಲ್ಲಿ ಬಡವರ ಬಗ್ಗೆ ಕಳಕಳಿ ಮತ್ತು ಕಾಳಜಿಗೆ ಜಾಗವಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಹಾಗೂ ಲೋಕಸಭೆ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೀದರ ಲೋಕಸಭೆ ಚುನಾವಣೆ ಪ್ರಚಾರ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಅವರು ಸಂಸತ್ತಿನಲ್ಲಿ ಕಡಿಮೆ ಮಾತನಾಡುತ್ತಾರೆ. ಕಾಂಗ್ರೆಸ್‌ ಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಅವರಿಗೆ ಸಂಸತ್ತು ಮತ್ತು ಜನರೊಂದಿಗೆ ಸಂಬಂಧ ಹೇಗೆ ಇರಬೇಕು ಎನ್ನುವುದರ ಕುರಿತು ತಿಳಿದಿಲ್ಲ ಎಂದರು.

ಪ್ರಧಾನ ಮಂತ್ರಿಯಾಗಿ ಐದು ವರ್ಷಗಳಲ್ಲಿ ಮಾಡಿದ ಸಾಧನೆ ತೋರಿಸಿ ಎಂದು ಸವಾಲು ಹಾಕಿದ್ದೇವೆ. ನಾನು ಹಿಂದುಳಿದ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ಮತ ಕೇಳುವ ನೈತಿಕತೆ ಇದೆ. ಕ್ಷೇತ್ರಕ್ಕಾಗಿ ಏನೂ ಕೆಲಸ ಮಾಡದವರು ಮತ ಕೇಳಲು ಬರುತ್ತಾರೆ. ಅವರಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371ನೇ (ಜೆ) ಕಲಂ ಜಾರಿಗೊಳಿಸಲಾಗಿದೆ. ನಾವು ನೀಡಿದ ಭರವಸೆಯಂತೆ ಕೆಲಸ ಮಾಡಿ ತೋರಿಸಿದ್ದೇವೆ.

Advertisement

ಕಳೆದ ಮಾರ್ಚ್‌ 6ರಂದು ಕಲಬುರಗಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸಾಕಷ್ಟು ಮಾತನಾಡಿದ್ದಾರೆ. ಆದರೆ ನನ್ನ ಬಗ್ಗೆ ಅವರಿಗೆ ಹೇಳಲು ಏನೂ ಇರಲಿಲ್ಲ. ಇಎಸ್‌ಐ ಆಸ್ಪತ್ರೆ, ಜಯದೇವ ಹೃದಯ ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಬಿಜೆಪಿಯವರ ಕಣ್ಣಿಗೆ ಕಾಣುವುದಿಲ್ಲವೇನು. ಅವರು ಕಣ್ಣಿದ್ದು ಕುರುಡರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಲಬುರಗಿ ಲೋಕಸಭೆ ಮತಕ್ಷೇತ್ರದಿಂದ ಎರಡು ಸಲ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದೇವೆ. ನಿಮ್ಮ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತಿದ್ದೇನೆ. ತಲೆ ಬಾಗಿಸುವಂತ ಕೆಲಸ ಮಾಡಿಲ್ಲ. ಗೌರವ ಮತ್ತು ಅಭಿಮಾನದಿಂದ ಕೆಲಸ ಮಾಡಿ ತೋರಿಸಿದ್ದೇನೆ. 11 ತಿಂಗಳ ಕಾಲ ರೈಲ್ವೆ ಖಾತೆ ಸಚಿವನಾಗಿದ್ದಾಗ 27 ಹೊಸ ರೈಲ್ವೆಗಳನ್ನು ಪ್ರಾರಂಭಿಸಿದ್ದೇನೆ. ಬೀದರ-ಬೆಂಗಳೂರು ಹೊಸ ರೈಲ್ವೆ ಪ್ರಾರಂಭಿಸಿದ್ದೇನೆ. ಬೀದರ-ಹುಮನಾಬಾದ ರೈಲ್ವೆ ಪ್ರಾರಂಭವಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಳೆ ರೈಲ್ವೆಗೆ ಹೊಸ ರೈಲು ಪ್ರಾರಂಭಿಸಲಾಗಿದೆ ಎಂದು ಹಸಿರು ನಿಶಾನೆ ತೋರಿಸಿದರು. 1999ರಲ್ಲಿ ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ಸಿಗಬೇಕೆಂದು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ನಾವು ನೀಡಿದ ಮನವಿಗೆ ಆಗಿನ ಗೃಹ ಸಚಿವ ಲಾಲಕೃಷ್ಣ ಅಡ್ವಾಣಿ ಒಪ್ಪಿಗೆ ನೀಡಲಿಲ್ಲ.

2014ರಲ್ಲಿ ಪ್ರಧಾನಮಂತ್ರಿಗಳು ವಿದೇಶದಲ್ಲಿ ಇರುವ ಕಪ್ಪು ಹಣತಂದು ಪ್ರತಿಯೊಬ್ಬರ ಖಾತೆ 15ಲಕ್ಷ ರೂ. ಹಾಕುತ್ತೇವೆ ಮತ್ತು ಪ್ರತಿವರ್ಷಕ್ಕೆ 2ಕೋಟಿ ಯುವಕರಿಗೆ ಉದ್ಯೋಗ ಕೊಡಿಸುತ್ತೇವೆ ಎಂದು ಹೇಳಿದರು. ಆದರೆ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 2.75ಕೋಟಿ ಯುವಕರು ನೌಕರಿ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹೋರಾಟ ನರೇಂದ್ರ ಮೋದಿ ವಿರುದ್ಧವಲ್ಲ. ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಬರೆದ ಸಂವಿಧಾನ ಉಳಿಸವುದೇ ನಮ್ಮ ಉದ್ದೇಶ. ಸಂವಿಧಾನ ನೀಡಿದ ಸ್ವಾತಂತ್ರ್ಯತೆ, ಸಮಾನತೆ ತತ್ವದ ಆಧಾರದ ಮೇಲೆ ಹೋರಾಟ ನಡೆಸಲಾಗುತ್ತಿದೆ. ದೇಶದ ಪ್ರಜೆಗಳಿಗೆ ಮತದಾನ ಹಕ್ಕು ಕೊಡಿಸಿದವರು ಕಾಂಗ್ರೆಸ್‌ನವರು. ದೇಶದಲ್ಲಿ ಬಿಜೆಪಿ ಸರಕಾರ ಬದಲಾವಣೆ ಆಗಬೇಕಾದರೆ ಮತದಾನ ಮಾಡಬೇಕು. ಲಾಲಕೃಷ್ಣ ಅಡ್ವಾಣಿ ಅವರು ಬಿಜೆಪಿ ಹುಟ್ಟು ಹಾಕುವುದಕ್ಕಾಗಿ ರಥ ಯಾತ್ರೆ ನಡೆಸಿದರು. ಅಂತಹವರನ್ನೇ ಮೂಲೆಗುಂಪು ಮಾಡುತ್ತಿದ್ದಾರೆ. ಇವೆಲ್ಲವನ್ನು ಗಮನಿಸಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ
ಮತ ನೀಡಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕೆಂದು ಹೇಳಿದರು.

ಸಚಿವ ರಹೀಮಖಾನ್‌ ಮಾತನಾಡಿ, ಈಶ್ವರ ಖಂಡ್ರೆ ಪೌರಾಡಳಿತ ಸಚಿವರಾಗಿದ್ದಾಗ ಬೀದರ ಕ್ಷೇತ್ರಕ್ಕೆ 550 ಕೋಟಿ ರೂ.ಅನುದಾನ ನೀಡಿದ್ದಾರೆ 120 ಕೋಟಿ ರೂ.ಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ 300 ಕೋಟಿ ರೂ.ಅನುದಾನ ನೀಡಿದ್ದಾರೆ. ಬೀದರ ಸಂಸದ ಭಗವಂತ ಖೂಬಾ ಒಂದೇ ಒಂದು ಕೈಗಾರಿಕೆ ಕೇಂದ್ರ ಸ್ಥಾಪನೆ ಮಾಡಲಿಲ್ಲ ಎಂದರು.

ಸಚಿವ ರಾಜಶೇಖರ ಪಾಟೀಲ ಮಾತನಾಡಿ, ನಾನು ಹುಮನಾಬಾದ ಮತಕ್ಷೇತ್ರದಿಂದ ನಾಲ್ಕು ಸಲ ಶಾಸಕರಾಗಿ ಆಯ್ಕೆಯಾದರೂ ಈಗ ಸಚಿವ ಸ್ಥಾನ ಸಿಕ್ಕಿದೆ. ಇಲ್ಲಿಯ ಶಾಸಕ ಡಾ| ಉಮೇಶ ಜಾಧವ್‌ ನೆಪ ಹೇಳಿ ಬಿಜೆಪಿ ಸೇರಿದ್ದಾರೆ. ಅವರಿಗೆ ಮತದಾರರೇ ತಕ್ಕಪಾಠ ಕಲಿಸುತ್ತಾರೆ ಎಂದರು.

ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ, ಮಾಜಿ ಶಾಸಕ ಕೈಲಾಶನಾಥ ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಶಿವಕುಮಾರ ಕೊಳ್ಳುರು, ಕನ್ನಿರಾಮ ರಾಠೊಡ, ದೇವೆಂದ್ರಪ್ಪ ಮರತೂರ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಸ್ವಾಗತಿಸಿದರು, ದೀಪಕನಾಗ ಪುಣ್ಯಶೆಟ್ಟಿ, ಆರ್‌. ಗಣಪತರಾವ ನಿರೂಪಿಸಿದರು, ಭೀಮರಾವ ತೇಗಲತಿಪ್ಪಿ ವಂದಿಸಿದರು. ಇದೇ ವೇಳೆ ಬಂಜಾರಾ ಸಮಾಜದ ಯುವ ಮುಖಂಡ ಸುಭಾಷ ರಾಠೊಡ ತಮ್ಮ ಸಮಾಜದ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್‌ ಸಾಧನೆ ಹೇಳೆ¤àವೆ-ಬಿಜೆಪಿಗೆ ಹೇಳಲು ಏನಿಲ್ಲ ದೇಶದಲ್ಲಿ ಕಾಂಗ್ರೆಸ್‌ ಕಳೆದ 55 ವರ್ಷಗಳಲ್ಲಿ ಅಂದರೆ 1947ಕ್ಕೂ ಮುಂಚೆ ದೇಶದಲ್ಲಿ ಸಾಕ್ಷರತೆ ಶೇ. 12 ಇತ್ತು. ನಂತರ ಶೇ. 74ರಷ್ಟು ಹೆಚ್ಚಾಯಿತು. 22 ಮಿಲಿಯನ್‌ ಹೆಕ್ಟೇರ್‌ ನೀರಾವರಿ ಪ್ರದೇಶವನ್ನು 68ಮಿಲಿಯನ್‌ ಹೆಕ್ಟೇರ್‌ ಪ್ರದೇಶಕ್ಕೆ ಹೆಚ್ಚಿಸಲಾಯಿತು. ಆಹಾರ ಉತ್ಪಾದನೆಯನ್ನು 50 ಮಿಲಿಯನ್‌ ಟನ್‌ದಿಂದ 265 ಮಿಲಿಯನ್‌ ಟನ್‌ ವರೆಗೆ ಹೆಚ್ಚಿಸಲಾಯಿತು. ಆಹಾರ ಉತ್ಪಾದನೆ ಹೆಚ್ಚಳ ಆಗಿರುವುದರಿಂದ ದೇಶದ ಎಲ್ಲ ಗೋದಾಮುಗಳು ತುಂಬಿ ತುಳಕುತ್ತಿದ್ದವು. ಆಗ ಸೋನಿಯಾ ಗಾಂಧಿ ಅವರು ಆಹಾರ ಭದ್ರತಾ ಯೋಜನೆ ಜಾರಿಗೆ ತಂದರು. ಬಡವರಿಗೆ ಪುಕ್ಕಟ್ಟೆಯಾಗಿ 35 ಕೆ.ಜಿ ಅಕ್ಕಿ ಕೊಡಲಾಯಿತು.

500 ಕಾಲೇಜುಗಳಿಂದ 3700 ಕಾಲೇಜುಗಳನ್ನು ಪ್ರಾರಂಭಿಸಲಾಯಿತು. ಇವೆಲ್ಲ ಸಾಧನೆಗಳನ್ನು ಸಂಸತ್ತಿನಲ್ಲಿ ಪ್ರಧಾನಮಂತ್ರಿಗಳಿಗೆ ತಿಳಿಸಿದ್ದೇನೆ. ಆದರೆ ಆದರೆ ಬಿಜೆಪಿ ಸರಕಾರದ ಸಾಧನೆಗಳೇನು ಎಂದು ಕೇಳಿದರೆ ಅವರು ಉತ್ತರ ಕೊಡುವುದಿಲ್ಲ.
ಡಾ| ಮಲ್ಲಿಕಾರ್ಜುನ ಖರ್ಗೆ, ಹಾಲಿ ಸಂಸದ, ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ

ಜಾಧವ್‌ ಭವಿಷ್ಯ ಹಾಳು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ ಕೀರ್ತಿ ಡಾ|ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ. ಇಲ್ಲಿಯ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸಿದ ಡಾ| ಉಮೇಶ ಜಾಧವ್‌ ಅವರ ಭವಿಷ್ಯವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ, ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೂ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್ಸಿಗೆ
ದ್ರೋಹ ಮಾಡಿದವರು ಎಂದಿಗೂ ಉದ್ಧಾರ ಆಗುವುದಿಲ್ಲ.
ಈಶ್ವರ ಖಂಡ್ರೆ, ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next