ಉರ್ವಸ್ಟೋರ್: ಚುನಾವಣಾ ಪೂರ್ವದಲ್ಲಿ ಭಾರೀ ಭರವಸೆ ನೀಡಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಸರಕಾರ ಬಳಿಕ ಜನತೆಯ ಹಿತಾಸಕ್ತಿಯನ್ನೇ ಮರೆತಿದೆ. ಆ ಮೂಲಕ ಜನರ ನಂಬಿಕೆಗೆ ಸರಕಾರ ಮೋಸ ಮಾಡಿದೆ ಎಂದು ಸಿಪಿಐ(ಎಂ) ನಗರ ದಕ್ಷಿಣ ಕಾರ್ಯ ದರ್ಶಿ ಸುನೀಲ್ ಕುಮಾರ್ ಬಜಾಲ್ ಆಪಾದಿಸಿದರು.
ಉರ್ವಸ್ಟೋರ್ ಹಾಗೂ ಬೋಳೂರು ಸಿಪಿಐ(ಎಂ) ಶಾಖೆಗಳ ಸಮ್ಮೇಳನದ ಅಂಗವಾಗಿ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಜರಗಿದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬೆಲೆ ಏರಿಕೆ ತಡೆಗಟ್ಟುವುದರೊಂದಿಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ, ನೇರ ನಗದು ವರ್ಗಾವಣೆ ಯೋಜನೆಯನ್ನು ವಿರೋಧಿಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಅಧಿಕಾರಕ್ಕೇರಿದ ಬಳಿಕ ವಿಪರೀತ ಬೆಲೆ ಏರಿಕೆ ಮಾಡಲಾಗಿದೆ. ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಮಾತನಾಡುತ್ತಿಲ್ಲ. ಜನ್‌ಧನ್ ಯೋಜನೆ ಹೆಸರಿನಲ್ಲಿ ಎಲ್ಲರ ಕೈಯಲ್ಲೂ ಬ್ಯಾಂಕ್ ಖಾತೆ ಹೊಂದುವ ಮೂಲಕ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ನೀಡಲಾಗಿದೆ. ಹೀಗೆ ನಿರಂತರವಾಗಿ ಜನ ಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದವರು ಆರೋಪಿಸಿದರು.
ಯುವ ನಾಯಕ ಪ್ರಶಾಂತ್ ಎಂ. ಬಿ. ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯ ಸಂತೋಷ್ ಶಕ್ತಿನಗರ ಮಾತನಾಡಿದರು. ಪಕ್ಷದ ಬೋಳೂರು ಶಾಖಾ ಕಾರ್ಯದರ್ಶಿ ಪ್ರಭಾವತಿ ಬೋಳೂರು, ಮನೋಜ್, ಕಿಶೋರ್ ಉಪಸ್ಥಿತರಿದ್ದರು.