ಹೊನ್ನಾಳಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ 3 ವರ್ಷಗಳ ಜನಪರ ಆಡಳಿತ ಸಾಧನೆ ಪ್ರಚಾರ ಹಾಗೂ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದವರು ಪ್ರಧಾನಿವರು ವಿದೇಶ ಪ್ರವಾಸದಲ್ಲಿ ಕಾಲ ಕಲೆಯುತ್ತಿದ್ದಾರೆ ಎಂದು ಟೀಕಿಸುತ್ತಿರುವುದು ಸಲ್ಲದು. ವಿದೇಶ ಪ್ರವಾಸದಿಂದ ಎಲ್ಲಾ ದೇಶಗಳ ಸ್ನೇಹ ಮಿಲನವಾಗಿರುವುದಲ್ಲದೇ ವಿದೇಶಿ ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ ಎಂದರು.
ಮೋದಿಯವರ ಗಟ್ಟಿ ನಿಲುವು ಮತ್ತು ಆಡಳಿತ ವಿಶ್ವವೇ ಹಾಡಿ ಹೊಗಳುತ್ತಿರುವಾಗ ಕಾಂಗ್ರೆಸ್ ಅನಾವಶ್ಯಕ ಟೀಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ದೇಶಕ್ಕೊಬ್ಬ ಉತ್ತಮ ಪ್ರಧಾನಿ ಬೇಕಾಗಿತ್ತು ಅದನ್ನು ಮತದಾರ ಗುರುತಿಸಿದ್ದಾನೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜಾತಿ ರಾಜಕೀಯ ಮಾಡುತ್ತಿದೆ.
ಜಾತಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ನೀತಿ ಅನುಸರಿಸಿ ಯೋಜನೆಗಳನ್ನು ರೂಪಿಸಿ ಕಾರ್ಯಗತ ಮಾಡಿದ್ದರು. 2018ರ ಚುನಾವಣೆಯಲ್ಲಿ ಮತ್ತೆ ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿಗಳಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಶಾಸಕರು ಕಳೆದ ನಾಲ್ಕು ವರ್ಷಗಳಲ್ಲಿ ಏನನ್ನು ಮಾಡದೇ ಚುನಾವಣೆ ಹತ್ತಿರ ಬಂದಿದೆ ಎಂದು ನೆನಪು ಮಾಡಿಕೊಂಡು ಹಿಂದೆ ನಾನು ಬಿಡುಗಡೆ ಮಾಡಿಸಿದ್ದ ಅನುದಾನದಲ್ಲಿ ಕೆಲಸ ಮಾಡುತ್ತಾ ಪತ್ರಿಕೆಯಲ್ಲಿ ತಾವೇ ಮಾಡಿಸಿದ್ದು ಎಂದು ಜಾಹೀರಾತು ಕೊಟ್ಟು ಪತ್ರಿಕೆಗಳನ್ನು ಮನೆ ಮನೆಗೆ ಹಂಚುವ ಕಾರ್ಯ ಮಾಡಿದ್ದಾರೆ ಇದೆಲ್ಲಾ ಬೊಗುಳೆ ಎಂದು ತಾಲೂಕಿನ ಜನತೆಗೆ ತಿಳಿದಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಮಾಜಿ ಸಚಿವ ರೇಣುಕಾಚಾರ್ಯ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಕಾರ್ಯಾನ್ಮುಖರಾಗುತ್ತಾರೆ.
ಅವರ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಉಮಾರಮೇಶ್, ಜಿಪಂ ಸದಸ್ಯೆ ದೀಪಾ ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಂತರಾಜ್‌ಪಾಟೀಲ್, ಮುಖಂಡರಾದ ಎಚ್.ಬಿ.ಮೋಹನ್, ಪಾಲಾಕ್ಷಪ್ಪ, ನಾಗರಾಜ್, ಅಬುಸಲಿಂ ಮಾತನಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಜಿ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಸುಲೋಚನಮ್ಮ ಪಾಲಾಕ್ಷಪ್ಪ, ತಾಪಂ ಸದಸ್ಯರಾದ ಸಿದ್ದಲಿಂಗಪ್ಪ, ಸಿ.ಆರ್. ಶಿವಾನಂದ್, ತಿಪ್ಪೇಶಪ್ಪ, ಮರಿಕನ್ನಪ್ಪ, ರವಿಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ನೆಲಹೊನ್ನೆ ಮಂಜುನಾಥ್, ಕನಕದಾಸ, ಮಾರುತಿನಾಯ್ಕ ಇತರರಿದ್ದರು.