Advertisement

ಮೋದಿಯಿಂದ ದೇಶದ ಅಭಿವೃದ್ಧಿ ಶೂನ್ಯ

01:08 PM Mar 31, 2019 | Lakshmi GovindaRaju |

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಕಾಲಹರಣ ಮಾಡಿದ್ದರಿಂದ ದೇಶದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು. ತಾಲೂಕಿನ ಚನ್ನರಾಯಪಟ್ಟಣದಲ್ಲಿ ಮತಯಾಚಿಸಿ ಮಾತನಾಡಿದರು.

Advertisement

ಬಡವರ ಪ್ರಾಣದ ಜತೆ ಚೆಲ್ಲಾಟ: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದು, 2 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ತರುವುದು ಮುಂತಾದ ಭರವಸೆಗಳನ್ನು ನೀಡಿ ಜನರನ್ನು ಬಣ್ಣದ ಮಾತುಗಳಿಂದ ಯಾಮಾರಿಸಿದ್ದಾರೆ. ನೋಟ್‌ ಬ್ಯಾನ್‌ ಮಾಡುವ ಮೂಲಕ ಹಲವಾರು ಬಡಜನರಿಗೆ, ಮಧ್ಯಮ ವರ್ಗದ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನಿಂದ ಶಾಂತಿಯ ಜೀವನ: ಜಿಎಸ್‌ಟಿ ಜಾರಿಗೆ ತರುವುದರ ಮೂಲಕ ದೇಶದ ಪ್ರತಿಯೊಬ್ಬರೂ ತೆರಿಗೆ ಕಟ್ಟುವಂತೆ ಮಾಡಿದ್ದಾರೆ. ಇದೇ ಅವರ ಸಾಧನೆಯಾಗಿದೆ. ಯುವಕರಿಗೆ ಉದ್ಯೋಗ ನೀಡುವ ಬದಲು ಪಕೋಡ ಮಾರಿ ಎಂದು ಅವಮಾನಿಸಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕಾಗಿಲ್ಲ. ಒಂದೇ ಒಂದು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದು, ಚುನಾವಣೆಯ ಗಿಮಿಕ್ಸ್‌ ಆಗಿದೆ.

ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ನಮಗೆ ಯುದ್ಧದ ಭೀತಿ ಇರಲಿಲ್ಲ. ಈಗ ಯಾವ ಸಮಯದಲ್ಲಿ ಯುದ್ಧ ಘೋಷಣೆಯಾಗುತ್ತದೆ ಎಂಬ ಭೀತಿಯಲ್ಲಿ ಜನರಿದ್ದಾರೆ. ನಮ್ಮ ಸೈನಿಕರನ್ನು ಕಳೆದುಕೊಂಡ ಮೇಲೆ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಾರೆ. ಅದರಲ್ಲಿ ಎಷ್ಟು ಸತ್ತಿದ್ದಾರೆ ಎಂಬುದರ ಅಂಕಿ ಅಂಶ ಕೇಳಿದರೆ ಉತ್ತರವಿಲ್ಲ. ದೇಶದ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೆ ಎಲ್ಲರೂ ಶಾಂತಿಯಿಂದ ಬದುಕು ನಡೆಸಬಹುದು ಎಂದರು.

ಯಡಿಯೂರಪ್ಪ ಮಾತು ಫ‌ಲಿಸಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ನಡೆಸಲಿದ್ದಾರೆ. ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಮಾಡಿದರೆ ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗುವುದರೊಂದಿಗೆ ಬಡಜನರಿಗೆ, ರೈತರಿಗೆ, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಮೈತ್ರಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆ. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಗೆ 23 ಸೀಟು ಬಂದ ಮಾರನೇ ದಿನವೇ ಮೈತ್ರಿ ಸರ್ಕಾರದ ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಹೇಳುತ್ತಾರೆ. ಅದೊಂದು ಭ್ರಮೆಯಾಗಿದೆ. ಇದು ಫಲಿಸುವುದಿಲ್ಲ ಎಂದು ಭವಿಷ್ಯ ನುಡಿದರು.

Advertisement

ಆಂಧ್ರದಿಂದ ನೀರು ತರುವ ಉದ್ದೇಶ: ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಆಂಧ್ರಪ್ರದೇಶದಿಂದ ನೀರು ತರುವ ಉದ್ದೇಶ ಹೊಂದಲಾಗಿದೆ. ಎತ್ತಿನಹೊಳೆ ಯೋಜನೆಯು ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಈ ಭಾಗದ ಕೆರೆಗಳಿಗೆ ನೀರು ಬರುವಂತೆ ಮಾಡಲಾಗುತ್ತಿದೆ.

ಹೆಬ್ಟಾಳ ಮತ್ತು ನಾಗವಾರ ಕೆರೆಗಳ ಶುದ್ಧಿಕರಿಸಿದ ನೀರನ್ನು ಈ ಭಾಗದ ಕೆರೆಗಳಿಗೆ ಹರಿಸಲು ಪೈಪ್‌ಲೇನ್‌ ಕಾಮಗಾರಿ ನಡೆಯುತ್ತಿದೆ. ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗುವುದರ ಜೊತೆಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಈ ಬಾರಿ ನನಗೆ ಮತ್ತೂಂದು ಅವಕಾಶ ನೀಡಿದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳ ಸರಮಾಲೆ ಮಾಡಲಾಗುವುದು.

ಇದು ನನ್ನ ಗುರಿಯಾಗಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಮಾತನಾಡಿ, ಎಂ.ವೀರಪ್ಪ ಮೊಯ್ಲಿ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಪ್ರತಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಸಾಮೂಹಿಕವಾಗಿ ಪ್ರಚಾರ ಆರಂಭಿಸಿದ್ದೇವೆ.

9 ತಿಂಗಳಿನಿಂದ ಮೈತ್ರಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಐದು ವರ್ಷಗಳ ಕಾಲ ಉತ್ತಮ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಅವರ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದರು. ಸಿಇಟಿ ಜಾರಿಗೆ ತರುವುದರ ಮೂಲಕ ಎಲ್ಲಾ ವರ್ಗದ ವಿದ್ಯಾರ್ಥಿಗಳು ಇಂಜಿನಿಯರಿಂಗ್‌, ವೈದ್ಯಕೀಯ, ಐಎಎಸ್‌, ಕೆಎಎಸ್‌ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಭಾಗದಲ್ಲಿ ನಾಲ್ಕು ತಾಲೂಕುಗಳು ಮಳೆ ಇಲ್ಲದೆ ಬರಗಾಲಕ್ಕೆ ತತ್ತರಿಸಿವೆ. ನೀರಿನ ಸಮಸ್ಯೆಯನ್ನು ಮೊಯ್ಲಿ ಅವರು ಶಾಶ್ವತವಾಗಿ ಬಗೆಹರಿಸಲಿದ್ದಾರೆ ಎಂದು ಹೇಳಿದರು.

ಮೈತ್ರಿ ಅಭ್ಯರ್ಥಿ ಗೆಲುವಿಗೆ ಯತ್ನ: ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಂತೆ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. 37 ಸ್ಥಾನ ಇರುವವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ. ಇದೊಂದು ಇತಿಹಾಸವಾಗಿದೆ. ಜೆಡಿಎಸ್‌ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೈಜೊಡಿಸಲಿದ್ದಾರೆ.

ತಾಲೂಕಿನ ಅಭಿವೃದ್ಧಿಗೆ ಸಂಸದ ವೀರಪ್ಪ ಮೊಯ್ಲಿ ಅವರು ಗೆದ್ದ ನಂತರ ಕೈಜೊಡಿಸಬೇಕು. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಶಾಮಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಶ್ರೀನಿವಾಸ್‌, ಕಾರ್ಯಾಧ್ಯಕ್ಷ ಆರ್‌.ಮುನೇಗೌಡ, ಜಿಪಂ ಸದಸ್ಯರಾದ ಜಿ.ಲಕ್ಷ್ಮೀನಾರಾಯಣ್‌, ಕೆಪಿಸಿಸಿ ಸದಸ್ಯರಾದ ಚೇತನ್‌ ಗೌಡ, ಪಟಾಲಪ್ಪ, ಚಿನ್ನಪ್ಪ, ರಾಜ್ಯ ಕಾಂಗ್ರೆಸ್‌ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌,

ಕಾರ್ಯದರ್ಶಿ ನಾಗೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ, ಚನ್ನರಾಯಟಪ್ಟಣ ಹೋಬಳಿ ಜೆಡಿಎಸ್‌ ಅಧ್ಯಕ್ಷ ಮುನಿರಾಜು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ತಾಪಂ ಅಧ್ಯಕ್ಷೆ ಭಾರತಿ, ಸದಸ್ಯರಾದ ವೆಂಕಟೇಶ್‌, ಎಸ್‌.ಮಹೇಶ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ನಾಗೇಶ್‌,

ಪುರಸಭಾ ಮಾಜಿ ಅಧ್ಯಕ್ಷ ಎಂ.ಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜು, ಉಪಾಧ್ಯಕ್ಷ ಪುರಷೋತ್ತಮ್‌ ಕುಮಾರ್‌, ತಾಪಂ ಮಾಜಿ ಸದಸ್ಯ ಲಕ್ಷ್ಮಣ್‌ಗೌಡ, ಖಾದಿ ಬೋರ್ಡ್‌ ಅಧ್ಯಕ್ಷ ಲಕ್ಷ್ಮಣ್‌ ಮೂರ್ತಿ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಬಾಬು, ಜಿಲ್ಲಾ ಎಸ್‌ಸಿ ಕಾಂಗ್ರೆಸ್‌ ಅಧ್ಯಕ್ಷ ಲೋಕೇಶ್‌, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next