ಬೆಂಗಳೂರು: ರಾಜ್ಯದಲ್ಲಿ ಇಂದು ಚಾಂದ್ರಮಾನ ಯುಗಾದಿ ಸಂಭ್ರಮ. ಕೋವಿಡ್ ನಡುವೆಯೂ ಜನರು ಭಕ್ತಿ ಭಾವದಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಯುಗಾದಿಯ ಶುಭಾಶಯ ಕೋರಿದ್ದಾರೆ.
ಕನ್ನಡಲ್ಲೇ ಶುಭಾಶಯ ಕೋರಿರುವ ಅವರು, ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗು ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗು ಸಂತೋಷ ಪಸರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಶುಭ ಕೋರಿದ ಸಿಎಂ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ, ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ. ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ, ಎಲ್ಲಾ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಿಸೋಣ ಎಂದಿದ್ದಾರೆ.
ಇದನ್ನೂ ಓದಿ:ಇಂದು ಚಾಂದ್ರಮಾನ ಯುಗಾದಿ; ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಶುಭಕೋರಿದ ಎಚ್ ಡಿಕೆ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದು, ಹೊಸತನ, ನಿರೀಕ್ಷೆ, ಭರವಸೆಗಳನ್ನು ಹೊತ್ತು ಯುಗಾದಿ ಬಂದಿದೆ. ಕಳೆದ ವರ್ಷದ ತೊಡಕುಗಳು ಈ ಹೊಸ ವರ್ಷ ನೀಗಲಿ. ಬೇವು-ಬೆಲ್ಲದ ಅನುಭವಗಳು ಈ ವರ್ಷ ಸಮನಾಗಿರಲಿ ಎಂದು ನಾನು ಆಶಿಸುತ್ತೇನೆ. ಈ ಶುಭ ವರ್ಷ ಎಲ್ಲರಿಗೂ ಒಳಿತು ತರಲೆಂದು ಭಗವಂತನಲ್ಲಿ ನಾನು ಕೋರುತ್ತೇನೆ. ನಾಡಿನ ಸಮಸ್ತರಿಗೂ ಯುಗಾದಿ-ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಇದನ್ನೂ ಓದಿ: ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು