Advertisement

ಮಿಷನ್‌ ಸರ್ಕಾರಕ್ಕೆ ಸಂಕಲ್ಪ ಮಾಡಿ​​​​​​​

06:00 AM Feb 20, 2018 | Team Udayavani |

ಮೈಸೂರು: ಮುಂಬರುವ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್‌ ನೇತೃತ್ವದ “ಕಮೀಷನ್‌ ಸರ್ಕಾರ’ವನ್ನು ಕಿತ್ತೂಗೆದು, ಬಿಜೆಪಿಯ “ಮಿಷನ್‌ ಸರ್ಕಾರ’ವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

Advertisement

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಕರ್ನಾಟಕದಲ್ಲಿರುವುದು ಲೂಟಿಕೋರ ಸರ್ಕಾರ. ಈ ಸರ್ಕಾರ ಹೆಚ್ಚು ದಿನ ಇದ್ದಷ್ಟೂ ರಾಜ್ಯ ಬರ್ಬಾದ್‌ ಆಗಿ ಹೋಗುತ್ತೆ. ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಇದು 10 ಪರ್ಸೆಂಟ್‌ ಸರ್ಕಾರ ಎಂದು ಹೇಳಿದ್ದೆ. ಆದರೆ, ನಾನು ದೆಹಲಿಗೆ ಹೋದ ಮೇಲೆ ಹಲವರು ದೂರವಾಣಿ ಕರೆ ಮಾಡಿ, ಸಂದೇಶ ಕಳುಹಿಸಿ, “”ಕರ್ನಾಟಕ ಸರ್ಕಾರದ ಕಮೀಷನ್‌ ವಿಚಾರದಲ್ಲಿ ನಿಮ್ಮ ಗ್ರಹಿಕೆ ತಪ್ಪಾಗಿದೆ. ಇದು 10 ಪರ್ಸೆಂಟ್‌ ಸರ್ಕಾರವಲ್ಲ. ಅಭಿವೃದ್ಧಿ ಹೆಸರಲ್ಲಿ ಇನ್ನೂ ಹೆಚ್ಚು ಕಮೀಷನ್‌ ಪಡೆಯಲಾಗುತ್ತಿದೆ. ಇದೊಂದು ಲೂಟಿಕೋರ ಸರ್ಕಾರ” ಎಂದು ತಿಳಿಸಿದರು. ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಹೊಡೆಯುವ ಭಂಡ ಸರ್ಕಾರ ಇದು ಎಂದು ವಾಗ್ಧಾಳಿ ನಡೆಸಿದರು.

ನಮ್ಮದು ವಿಕಾಸಕ್ಕಾಗಿ ಕೆಲಸ:
ನಾವು ಕರ್ನಾಟಕದ ವಿಕಾಸಕ್ಕಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನವರು ಕಮೀಷನ್‌ಗಾಗಿ ಕೆಲಸ ಮಾಡುತ್ತಾರೆ. ನೀವೇ ಯೋಚಿಸಿ ನಿಮಗೆ ಕಮೀಷನ್‌ ಸರ್ಕಾರ ಬೇಕೋ, ಮಿಷನ್‌ ಸರ್ಕಾರವೋ ಎಂದು ಪ್ರಶ್ನಿಸಿದರು.

ಸ್ವಾತಂತ್ರಾÂನಂತರ 50 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಮತ್ತು ದೇಶದ ಆಡಳಿತ ನಡೆಸಿರುವ ಕಾಂಗ್ರೆಸ್‌, ಸಮಾಜದ ಭಾವನೆಗಳಿಗೆ ಬೆಲೆ ನೀಡುವ ಕೆಲಸ ಮಾಡಿಲ್ಲ. ಸಣ್ಣ ಮನಸ್ಥಿತಿಯ ಕಾಂಗ್ರೆಸ್‌ನ ಭಂಡ ನಾಯಕರಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆಯೇ ಇಲ್ಲ. ಕುರ್ಚಿ ಉಳಿಸಿಕೊಳ್ಳುವುದೇ ಅವರ ದಿನನಿತ್ಯದ ಚಿಂತೆ ಎಂದು ಹರಿಹಾಯ್ದರು.

Advertisement

ಕಾಂಗ್ರೆಸ್‌ ಕಿತ್ತೆಸೆದರೇನೆ ನೆಮ್ಮದಿ:
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ಸರ್ಕಾರ ಮಾಡದ ಸಾಧನೆಯನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಜನತೆಯ ಮುಂದೆ ಸುಳ್ಳುಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಡ, ಮಧ್ಯಮವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಕರ್ನಾಟಕ ಸರ್ಕಾರ ಸದ್ಬಳಕೆ ಮಾಡಿಕೊಳುತ್ತಿಲ್ಲ. ದೆಹಲಿಗೆ ಬಂದು ರಾಜ್ಯಕ್ಕೆ ಹೆಚ್ಚು ಅನುದಾನ ತರುವ ಮನಸ್ಥಿತಿಯೂ ಅವರಲ್ಲಿಲ್ಲ. ಇಲ್ಲಿನ ಸರ್ಕಾರದ ಬೇರೆ ಬೇರೆ ಇಲಾಖೆಗಳ, ಸಚಿವರುಗಳ ಮೇಲೆ ದಿನಕ್ಕೊಂದು ಹೊಸ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೆ, ಈ ಸರ್ಕಾರ ಎಷ್ಟು ಬೇಗ ಹೋಗುತ್ತೋ ಅಷ್ಟು ಒಳ್ಳೆಯದು ಎಂದರು.

ದೇಶವಾಳಿದ “ಕೈ’ ಮಾಡಿದ್ದೇನು?:
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ದೇಶವನ್ನಾಳಿದರೂ ಇಂದಿಗೂ ಕೋಟ್ಯಂತರ ಬಡ, ಮಧ್ಯಮ ವರ್ಗದ ಜನರು ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಸತಿ ಯೋಜನೆಯಡಿ ದಲಿತರು, ಬಡ-ಮಧ್ಯಮ ವರ್ಗದವರಿಗೆ ತಲೆಯ ಮೇಲೊಂದು ಸೂರು ಒದಗಿಸುವುದು ನಮ್ಮ ಕರ್ತವ್ಯ. ನಾಲ್ಕು ಕೋಟಿ ಕುಟುಂಬಗಳು ಇಂಧನ ಇಲ್ಲದೇ ಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಇಂತಹ ಅವ್ಯವಸ್ಥೆಗಳನ್ನು ಹೋಗಲಾಡಿಸಿ, ದೇಶದ ಜನರಲ್ಲಿ ಆತ್ಮ ವಿಶ್ವಾಸ  ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ದೇಶದ ಯುವಜನತೆಗೆ ಸುಲಭವಾಗಿ ಸಾಲ ಸೌಲಭ್ಯ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿದ್ದೇವೆ. ಬ್ಯಾಂಕ್‌ ಅನ್ನೇ ನೋಡದ ಬಡವರೂ ಸಹ ಪ್ರಧಾನಮಂತ್ರಿ ಜನಧನ್‌ ಯೋಜನೆಯಡಿ ಬ್ಯಾಂಕ್‌ಖಾತೆ ತೆರೆಯುವಂತೆ ಮಾಡಿದ್ದೇವೆ. ಸರ್ಕಾರಿ ನೌಕರಿಗೆ ಸಂದರ್ಶನದ ಹೆಸರಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಮುಕ್ತಿ ಹಾಡಿ, ಮೆರಿಟ್‌ ಆಧಾರದಲ್ಲಿ ನೌಕರಿ ಒದಗಿಸುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ಮಾಡಿದರು.

ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್‌ ಸರ್ಕಾರ ಇದೆಯೋ ಅಲ್ಲಿ ಅಭಿವೃದ್ಧಿಗೆ ಬದಲಾಗಿ ಹಿನ್ನಡೆ ಕಾಣುತ್ತಿದೆ. ಇದಕ್ಕೆ ಮುಕ್ತಿ ಹಾಡಬೇಕಾದರೆ ಜನರು ಕಮೀಷನ್‌ ಸರ್ಕಾರವನ್ನು ಕಿತ್ತೂಗೆಯಲು ಸಂಕಲ್ಪ ಮಾಡಬೇಕು ಎಂದರು.

ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ.ಸದಾನಂದ ಗೌಡ, ಪ್ರಕಾಶ್‌ ಜಾವಡೇಕರ್‌, ಪಿಯೂಷ್‌ ಗೋಯಲ್‌, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ, ಸಂಸದರಾದ ಶೋಭಾ ಕರಂದ್ಲಾಜೆ, ಬಿ.ಶ್ರೀರಾಮುಲು, ಪ್ರತಾಪ್‌ ಸಿಂಹ, ಮಾಜಿ ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್‌, ಎಸ್‌.ಎ.ರಾಮದಾಸ್‌, ಶಾಸಕರಾದ ಅಪ್ಪಚ್ಚು ರಂಜನ್‌,ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌, ಮಾಜಿ ಕೇಂದ್ರ ಸಚಿವೆ ಪುರಂದರೇಶ್ವರಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌, ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ಅರುಣ್‌ ಕುಮಾರ್‌, ಎನ್‌.ರವಿಕುಮಾರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ನಗರ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡದಲ್ಲೇ ಆರಂಭ.. ಕನ್ನಡದಲ್ಲೇ ಮುಕ್ತಾಯ…
“ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭಾಷಣವನ್ನು ಮುಗಿಸಿದ್ದು ಕೂಡ ಕನ್ನಡದಲ್ಲೇ.

ಚಾಮುಂಡೇಶ್ವರಿ ಮಾತೆಗೆ ನನ್ನ ಪ್ರಣಾಮಗಳು. ಮೈಸೂರು ಅರಸರು, ಸರ್‌ ಎಂ.ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು, ಸುತ್ತೂರು ಮಹಾ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿಗಳಂತಹ ಮಹಾನುಭಾವರಿಗೆ ನಮ್ಮ ನಮನಗಳು. ಮೈಸೂರು ರೇಷ್ಮೆ, ಮೈಸೂರಿನ ಶ್ರೀಗಂಧ, ಮೈಸೂರು ಮಲ್ಲಿಗೆ, ಮೈಸೂರು ಪಾಕ್‌ ಜಗತøಸಿದ್ಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ತಮ್ಮ ಭಾಷಣದ ಮುಕ್ತಾಯವನ್ನೂ ಕನ್ನಡದಲ್ಲೇ ಮಾಡಿದ ಅವರು, “ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಿರಿ. ಈ ಬಾರಿ ಬಿಜೆಪಿ ಗೆಲ್ಲಿಸಿರಿ’ ಎಂದು ಜನರಿಂದ ಘೋಷಣೆ ಕೂಗಿಸಿದರು.

ಕರಾವಳಿಯಲ್ಲಿ ಅಮಿತ್‌ ಶಾ
ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ.

“ನವಭಾರತ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ’ ವಿಷಯದ ಬಗ್ಗೆ ಮಂಗಳವಾರ ಇಲ್ಲಿನ ನೆಹರೂ ನಗರ ವಿವೇಕಾನಂದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಬಿಜೆಪಿ ಆಯೋಜನೆಯ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ಬುನಾದಿಯೇ ಇಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ, ಈ ಪ್ರಾಂತ್ಯದಲ್ಲಿ ಬಿಜೆಪಿ ಯಾವತ್ತೂ ಗೆದ್ದೇ ಇಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next