ಹೊಸದಿಲ್ಲಿ: ‘ಯಾವುದೇ ಸಂಘರ್ಷವನ್ನು ತೋಳ್ಬಲದಿಂದ ಹತ್ತಿಕ್ಕಲು ಪ್ರಯತ್ನಿಸದೆ, ಮಾತುಕತೆ ಮೂಲಕ ಬಗೆಹರಿಸುವ ಉದಾತ್ತ ಜೀವನಕ್ರಮವೊಂದು ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿದ್ದು, ಇದರ ಫಲದಿಂದಾಗಿ, ವಿಶ್ವದ ಯಾವುದೇ ಸಮುದಾಯಗಳಲ್ಲಿ ಇರದಷ್ಟು ಶಾಂತಿ, ಸೌಹಾರ್ದತೆ ಶತಮಾನಗಳಿಂದ ಭಾರತದಲ್ಲಿ ನೆಲೆಸಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಐಐಟಿ ಕಲ್ಲಿಕೋಟೆಯಲ್ಲಿ ಆಯೋಜಿಸಲಾದ ‘ಗ್ಲೋಬಲೈಸಿಂಗ್ ಇಂಡಿಯನ್ ಥಾಟ್’ ವಿಚಾರ ಸಂಕಿರಣವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವೈವಿಧ್ಯಗಳ ನಡುವೆಯೂ ಶಾಂತಿಯಿಂದ ಬಾಳ್ವೆ ಮಾಡುವುದು ಹೇಗೆಂಬುದನ್ನು ಭಾರತೀಯ ಸಂಸ್ಕೃತಿ ನಮಗೆ ಕಲಿಸಿಕೊಟ್ಟಿದೆ ಎಂದರು.
‘ಹಲವು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ನಂಬಿಕೆಗಳ ಹೊರತಾಗಿಯೂ ಶತಮಾನಗಳಿಂದ ನಾವು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಾ ಬಂದಿದ್ದೇವೆ. ಇದೇ ನಮ್ಮ ಪರಂಪರೆಯ ವಿಶೇಷತೆ. ಇಂಥ ಶಾಂತಿ, ಸೌಹಾರ್ದತೆಯಿಂದಾಗಿಯೇ ನಮ್ಮಲ್ಲಿ ಅನೇಕ ಸಂಶೋಧನೆಗಳಾಗಿವೆ. ಇಂದಿಗೂ ಹೊಸತನ್ನು ನಾವು ಕಂಡುಹಿಡಿಯುತ್ತಲೇ ಇದ್ದೇವೆ. ಇದನ್ನು ಮನಗಂಡಿರುವ ವಿಶ್ವ ಇಂದು ಭಾರತದತ್ತ ಆಕರ್ಷಿತವಾಗಿದೆ’ ಎಂದರು.