Advertisement

ಮೋದಿ ಪ್ರಮಾಣ: ಮಂಗಳೂರು ಮುಗಿಲು ಮುಟ್ಟಿದ ಸಂಭ್ರಮ

02:44 AM May 31, 2019 | Team Udayavani |

ಅತ್ತ ದಿಲ್ಲಿಯಲ್ಲಿ ನರೇಂದ್ರ ಮೋದಿ ದ್ವಿತೀಯ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಹಲವು ಪ್ರಮುಖ ಸ್ಥಳಗಳಲ್ಲಿ ಬೃಹತ್‌ ಪರದೆಯ ಮೂಲಕ ವ್ಯವಸ್ಥೆ ಮಾಡಲಾಗಿದ್ದ ಸಮಾರಂಭದ ನೇರ ಪ್ರಸಾರವನ್ನು ಜನರು ವೀಕ್ಷಿಸಿ ಸಂತಸಪಟ್ಟರು. ರಾಷ್ಟ್ರ ನಾಯಕನೊಬ್ಬ ಜನಸಾಮಾನ್ಯರ ಬದುಕಿನಲ್ಲೂ ಅಭಿಮಾನದಿಂದ ಬೆಸೆದುಕೊಂಡದ್ದಕ್ಕೆ ಸಾಕ್ಷಿ ಎಂಬಂತೆ ಅನೇಕ ಕಡೆಗಳಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ ಉಚಿತ ಸೇವೆಗಳು, ಹರಕೆ ಪೂರೈಸುವಿಕೆ, ಪೂಜೆ ಪುನಸ್ಕಾರಗಳು ಮೋದಿ ಹೆಸರಿನಲ್ಲಿ ನಡೆದವು.

Advertisement

ಮಂಗಳೂರು: ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಮೋದಿ ಅಭಿಮಾನಿ ಗಳು ಮತ್ತು ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಜಗತ್ತೇ ಮೋದಿ ಪ್ರಮಾಣವಚನಕ್ಕೆ ಕಾತರಿಸಿದ್ದರೆ ಜಿಲ್ಲೆಯ ಅಭಿಮಾನಿಗಳು ವಿವಿಧ ಸೇವೆಗಳ ಮೂಲಕ ಅಭಿಮಾನ ತೋರ್ಪಡಿಸಿದರು. ಮೂಡು ಬಿದಿರೆ- ಕಿನ್ನಿಗೋಳಿ-  ಸುರತ್ಕಲ್‌-ಮಂಗಳೂರು ಮಧ್ಯೆ ಸಂಚರಿಸುವ ಕೋಟ್ಯಾನ್‌ ಸರ್ವೀಸ್‌ ಬಸ್‌ನ ಚಾಲಕ ಶ್ರೀಕಾಂತ್‌ ಬಲವಿನಗುಡ್ಡೆ ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ಇಡೀ ದಿನ ಪ್ರಯಾಣಿಕ ರಿಗೆ ಉಚಿತ ಪ್ರಯಾಣ ಕಲ್ಪಿಸಿದರು. ಪ್ರತಿ ದಿನ ಈ ಬಸ್‌ನಲ್ಲಿ 7ರಿಂದ 8 ಸಾವಿರ ರೂ.ಗಳಷ್ಟು ಮೊತ್ತ ಸಂಗ್ರಹ ವಾಗುತ್ತದೆ. ಗುರುವಾರ ಇಡೀ ದಿನ 3 ಟ್ರಿಪ್‌ ಸಂಚರಿಸಿದ್ದು, ಉಚಿತ ಸಂಚಾರ ಒದಗಿಸಿ ಮೊತ್ತವನ್ನು ಚಾಲಕ ಮತ್ತವರ ಸ್ನೇಹಿತರು ಕೈಯಾರೆ ಭರಿಸಿದ್ದಾರೆ.

ಎಲ್‌ಸಿಡಿ ಪರದೆಯಲ್ಲಿ ವೀಕ್ಷಣೆ
ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಪಿವಿಎಸ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬೃಹತ್‌ ಎಲ್‌ಸಿಡಿ ಪರದೆ ಹಾಕಲಾಗಿತ್ತು. ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಮೋದಿ ಅಭಿಮಾನಿಗಳ ವತಿಯಿಂದ ಮತ್ತು ಬಿಜೆಪಿ ಸ್ಲಂ ಮೋರ್ಚಾದ ವತಿಯಿಂದ ಪಿವಿಎಸ್‌ ಕಲಾಕುಂಜದ ಬಳಿ ಇರುವ ಬಿಜೆಪಿ ಕಾರ್ಯಾಲಯದಲ್ಲಿ ಬೃಹತ್‌ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿತ್ತು. ಕಲಾವಿದ ಹರೀಶ್‌ ಆಚಾರ್ಯ ಮರಳಿನಲ್ಲಿ ಮೋದಿ ಚಿತ್ರ ರಚಿಸಿದ್ದರು.

ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿ ನಗರದ ಅಲ್ಲಲ್ಲಿ ಅಭಿಮಾನಿಗಳು ಪೋಸ್ಟರ್‌ಗಳನ್ನು ಹಾಕಿದ್ದರು.

Advertisement

ವಿಶೇಷ ಪೂಜೆ; ಬಾಯಿಗೆ ಸಿಹಿ
ಪುತ್ತೂರು ನಗರ, ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಯಾನಿಗಳು ಸಂಭ್ರಮಾ ಚರಣೆ ನಡೆಸಿದರು. ಅಲ್ಲಲ್ಲಿ ಸಿಹಿತಿಂಡಿ ವಿತರಣೆ, ಎಲ್‌ಸಿಡಿ ಪರದೆಯಲ್ಲಿ ಮೂಲಕ ಪ್ರಮಾಣವಚನ ಸ್ವೀಕಾರ ವೀಕ್ಷಣೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಕೆಲವು ಕಡೆಗಳಲ್ಲಿ ಮೋದಿ ಟೀ ಹಂಚಲಾಯಿತು.

10 ಸಾವಿರ ಲಾಡು, 3 ಸಾವಿರ ಚಹಾ!
ಸುಳ್ಯದಲ್ಲಿ ಮೋದಿ ಅಭಿಮಾನಿ ಬಳಗದಿಂದ ಗುರುವಾರ ಸಂಜೆ ಖಾಸಗಿ ಬಸ್‌ ನಿಲ್ದಾಣದ ಬಳಿ 10 ಸಾವಿರ ಲಾಡು, 3 ಸಾವಿರ ಚಹಾ ವಿತರಿಸಲಾಯಿತು. ಮೋದಿ ಪ್ರಮಾಣ ವಚನ ಕಾರ್ಯಕ್ರಮವನ್ನು ಬೃಹತ್‌ ಪರದೆಯ ಮೂಲಕ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದ್ದರೂ ನಗರ ಪಂಚಾಯತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಸಾರ ಕಾರ್ಯಕ್ರಮ ಕೈ ಬಿಡಲಾಗಿತ್ತು.

ಪಟಾಕಿ ಸಿಡಿಸಿ ಸಂಭ್ರಮ
ಮೋದಿಯವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಂಗಳೂರು ನಗರದಲ್ಲಿ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಶೇಷ ಪೂಜೆ ಪುನಸ್ಕಾರ
ಸವಣೂರು ಬಸದಿಯಲ್ಲಿ ಗುರುವಾರ ಸಂಜೆ ಮಾತೆ ಪದ್ಮಾವತಿ ದೇವಿಗೆ ವಿಶೇಷ ಪೂಜೆ ನಡೆಸಿ ಸಿಹಿ ಹಂಚಲಾಯಿತು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ, ಬಂಟ್ವಾಳದ ರಕ್ತೇಶ್ವರಿ ದೇವಿಯ ಸನ್ನಿಧಿಯಲ್ಲೂ ಭಜನೆ ಮತ್ತು ವಿಶೇಷ ಪೂಜೆ ಜರಗಿತು.

ರಕ್ತದಾನ
ಸುಳ್ಯದ ಕೆವಿಜಿ ಮೆಡಿಕಲ್‌ ಕಾಲೇಜಿನಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next