Advertisement

ಮೋದಿ ಪ್ರಮಾಣ :ಉಡುಪಿಯಲ್ಲಿ ಸಂಭ್ರಮಾಚರಣೆ

01:56 AM May 31, 2019 | Team Udayavani |

ಅತ್ತ ದಿಲ್ಲಿಯಲ್ಲಿ ನರೇಂದ್ರ ಮೋದಿ ದ್ವಿತೀಯ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಹಲವು ಪ್ರಮುಖ ಸ್ಥಳಗಳಲ್ಲಿ ಬೃಹತ್‌ ಪರದೆಯ ಮೂಲಕ ವ್ಯವಸ್ಥೆ ಮಾಡಲಾಗಿದ್ದ ಸಮಾರಂಭದ ನೇರ ಪ್ರಸಾರವನ್ನು ಜನರು ವೀಕ್ಷಿಸಿ ಸಂತಸಪಟ್ಟರು. ರಾಷ್ಟ್ರ ನಾಯಕನೊಬ್ಬ ಜನಸಾಮಾನ್ಯರ ಬದುಕಿನಲ್ಲೂ ಅಭಿಮಾನದಿಂದ ಬೆಸೆದುಕೊಂಡದ್ದಕ್ಕೆ ಸಾಕ್ಷಿ ಎಂಬಂತೆ ಅನೇಕ ಕಡೆಗಳಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ನೆಲೆಯಲ್ಲಿ ಉಚಿತ ಸೇವೆಗಳು, ಹರಕೆ ಪೂರೈಸುವಿಕೆ, ಪೂಜೆ ಪುನಸ್ಕಾರಗಳು ಮೋದಿ ಹೆಸರಿನಲ್ಲಿ ನಡೆದವು.

Advertisement

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಸಂಭ್ರಮಾಚರಣೆ ನಡೆಯಿತು. ನೂರಾರು ಮಂದಿ ಬೃಹತ್‌ ಪರದೆ ಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿ ಸಂಭ್ರಮಿಸಿದರು.

ಮೋದಿಯವರು ಸಮಾರಂಭ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಚಪ್ಪಾಳೆ ತಟ್ಟುತ್ತಾ “ಭಾರತ್‌ ಮಾತಾ ಕಿ ಜೈ’ ಘೋಷಣೆ ಕೂಗುತ್ತಾ ಸಂಭ್ರಮಿಸಿದ ಜನತೆ “ಮೋದಿ… ಮೋದಿ’ ಎಂದು ಕೂಗತೊಡಗಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್‌, ಸ್ಮತಿ ಇರಾನಿ ಪ್ರಮಾಣವಚನ ಸ್ವೀಕರಿಸುವಾಗಲೂ ಚಪ್ಪಾಳೆ ಜೋರಾಗಿತ್ತು. ಜಿಲ್ಲಾ ಪ್ರ. ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌, ಸಂಧ್ಯಾ ರಮೇಶ್‌, ರಾಘವೇಂದ್ರ ಕಿಣಿ, ನಳಿನಿ ಪ್ರದೀಪ್‌ ರಾವ್‌ ಪಾಲ್ಗೊಂಡಿದ್ದರು.

“ಶೋಭಾಗೆ ಸ್ಥಾನ ನಿರೀಕ್ಷೆಯಿತ್ತು’
ಈ ಸಂದರ್ಭದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತುಂಬಾ ಖುಷಿಯಾಗುತ್ತಿದೆ. ಆದರೆ ಶೋಭಾ ಅವರಿಗೂ ಮಂತ್ರಿ ಸ್ಥಾನ ದೊರೆಯಬಹುದೆಂಬ ನಿರೀಕ್ಷೆ ಇತ್ತು. ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯಾದರೂ ಅವರಿಗೆ ಅವಕಾಶ ನೀಡಬೇಕು. ಸದಾನಂದ ಗೌಡ ಅವರಿಗೆ ಉಡುಪಿ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಾರ್ಯಕರ್ತರು 11 ಕಡೆ ಬೃಹತ್‌ ಪರದೆ ಮೂಲಕ ಸಮಾರಂಭದ ನೇರ ಪ್ರಸಾರ ವೀಕ್ಷಿಸುವ ವ್ಯವಸ್ಥೆ ಮಾಡಿದ್ದಾರೆ. ಹೊಸದಿಲ್ಲಿ ಸಮಾರಂಭಕ್ಕೆ ಆಹ್ವಾನ ಇತ್ತು. ವೈಯಕ್ತಿಕ ಕಾರಣದಿಂದ ತೆರಳಲಿಲ್ಲ. ಶಾಸಕರಾದ ರಘುಪತಿ ಭಟ್‌ ಮತ್ತು ಸುನಿಲ್‌ ಕುಮಾರ್‌ ಹೊಸದಿಲ್ಲಿಗೆ ತೆರಳಿದ್ದಾರೆ ಎಂದರು.

ಕೂಲಿ ಕಾರ್ಮಿಕರಿಂದಲೂ ಸ್ಪಂದನೆ
ಸಿಹಿತಿಂಡಿ ಹಂಚುತ್ತಿರುವುದನ್ನು ಕಂಡ ಬೆಳಗಾವಿ ಮೂಲದ ಕೌÒರ ವೃತ್ತಿ ಮಾಡುವ ಸಿದ್ದು ಮತ್ತು ಕೂಲಿ ಕಾರ್ಮಿಕ ದುರ್ಗಪ್ಪ ಕೂಡ ಲಾಡು ತಂದು ಕಾರ್ಯಕರ್ತರಿಗೆ ನೀಡಿ ವಿತರಿಸಲು ವಿನಂತಿಸಿದರು.
ಹೊಟೇಲ್‌ಗ‌ಳಲ್ಲಿ ಪಾಯಸ, ತಿನಿಸು ವಿತರಣೆ ನಡೆಯಿತು.

Advertisement

ಮಣಿಪಾಲದ ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ವಿಶೇಷ ಆರೋಗ್ಯ ತಪಾಸಣೆ ನಡೆಯಿತು. ಬ್ರಹ್ಮಾವರದ ಜನೌಷಧಿ ಕೇಂದ್ರದಲ್ಲಿ ಫ‌ಲಪುಷ್ಪ ಗಿಡಗಳ ವಿತರಣೆ ನಡೆಸಲಾಯಿತು. ಉಪ್ಪೂರಿನ ಸ್ಪಂದನ ಬೌ ದ್ಧಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದಲ್ಲಿ ಭೋಜನಕೂಟವಿತ್ತು.

ಕುಂದಾಪುರದಲ್ಲಿಯೂ
ಶಾಸಿŒ ಸರ್ಕಲ್‌, ತ್ರಾಸಿ, ತೆಕ್ಕಟ್ಟೆ ಬಳಿ ಪರದೆ ಮೂಲಕ ಪ್ರದರ್ಶಿಸಿ 350ಕ್ಕೂ ಹೆಚ್ಚು ಮಂದಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪೇಟೆ ವೆಂಕಟರಮಣ ದೇವಸ್ಥಾನದ ಮುಂಭಾಗ ಸಿಹಿ ತಿಂಡಿ, ಟಿ- ಶರ್ಟ್‌ ನೀಡಲಾಯಿತು. ಕುಂದಾಪುರದ ವಕೀಲರು ಸಿಹಿ ಹಂಚಿ ಖುಷಿಪಟ್ಟರು. ಗಂಗೊಳ್ಳಿ ಮತ್ತು ಗುಜ್ಜಾಡಿ ಭಾಗದಲ್ಲಿ ನೇರ ಪ್ರಸಾರ ಪ್ರದರ್ಶನಕ್ಕೆ ಅನುಮತಿ ಕೇಳಿದ್ದರೂ, ಅನುಮತಿ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿಬಂತು.

ಪ್ರಮಾಣವಚನದಲ್ಲಿ ಪೇಜಾವರ ಶ್ರೀ
ನರೇಂದ್ರ ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಪಾಲ್ಗೊಂಡರು.

ಬುಧವಾರ ಮಂಗಳೂರು ಕಾವೂರಿನಲ್ಲಿ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಬೆಂಗಳೂರು ಮೂಲಕ ಹೊಸದಿಲ್ಲಿಗೆ ತಡರಾತ್ರಿ ತಲುಪಿದರು. ಗುರುವಾರ ಏಕಾದಶಿ, ದಿಲ್ಲಿಯಲ್ಲಿ 40 ಡಿಗ್ರಿ ದಾಟಿದ ಉಷ್ಣಾಂಶವಿದ್ದರೂ ನಿರ್ಜಲ ಉಪವಾಸದಲ್ಲಿದ್ದ 88ರ ಹರೆಯದ ಶ್ರೀಗಳು ದಿಲ್ಲಿಯ ಮಠದಲ್ಲಿ ಅನುಷ್ಠಾನ ನಡೆಸಿ ಪ್ರಧಾನಮಂತ್ರಿ ಪ್ರಮಾಣವಚನದಲ್ಲಿ ಪಾಲ್ಗೊಂಡರು.

ಗುರುವಾರ ತಡರಾತ್ರಿ ಬೆಂಗಳೂರಿಗೆ, ಅಲ್ಲಿಂದ ವಿಮಾನದಲ್ಲಿ ಮಂಗಳೂರಿಗೆ ಬಂದು ದ್ವಾದಶಿ ಪೂಜೆಯನ್ನು ಕಾವೂರಿನಲ್ಲಿ ಶುಕ್ರವಾರ ಮುಂಜಾನೆ ನೆರವೇರಿಸುವರು. ಬಳಿಕ ಬೆಳಗ್ಗೆ ಶ್ರೀಕೃಷ್ಣ ಮಠದಲ್ಲಿ ನಡೆಯುವ ಸುವರ್ಣಗೋಪುರದ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅಪರಾಹ್ನ ಮೈಸೂರಿಗೆ ತೆರಳುವರು.

ಸಾಮಾನ್ಯ ಕಾರ್ಯಕರ್ತರಿಗೂ ಆಹ್ವಾನ
ಕುಂದಾಪುರ: ಪ್ರಮಾಣವಚನ ಸಮಾರಂಭಕ್ಕೆ ಕುಂದಾಪುರ ಮತ್ತು ಬ್ರಹ್ಮಾವರ ಮೂಲದ ಇಬ್ಬರು ಸಾಮಾನ್ಯ ವ್ಯಕ್ತಿಗಳಾದ ಜೈ ಭಾರ್ಗವ ಸಂಘಟನೆಯ ಅಜಿತ್‌ ಶೆಟ್ಟಿ ಕಿರಾಡಿ ಮತ್ತು ಬ್ರಹ್ಮಾವರದ ಅಜಿತ್‌ ಅವರಿಗೆ ಆಹ್ವಾನ ಬಂದಿದ್ದು, ರಾಷ್ಟ್ರಪತಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತ ಶ್ರೀಧರ ಬಿಜೂರು ಅವರಿಗೂ ಆಹ್ವಾನವಿತ್ತು.

ಅಜಿತ್‌ ಶೆಟ್ಟಿ ಕಿರಾಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಇದಕ್ಕಿಂತ ಹೆಚ್ಚೇನು ಬೇಕು ಎಂದಿದ್ದಾರೆ. ಪ್ರಧಾನಿ ಪರವಾಗಿ ಚುನಾವಣೆ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ಆತ್ಮತೃಪ್ತಿಗಾಗಿ ಕಾರ್ಯ ನಿರ್ವಹಿಸಿ ದ್ದೇನೆ. ಈಗ ಅದಕ್ಕೊಂದು ಗೌರವ ಸಿಕ್ಕಿದೆ. ದಿಲ್ಲಿಯಿಂದ ಕರೆ ಬಂದಿದ್ದು, ಈ ಬಗ್ಗೆ ಕನಸು ಕೂಡ ಕಂಡಿರಲಿಲ್ಲ ಎನ್ನುವುದಾಗಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next