Advertisement

ಅನುದಾನ ಬಿಡುಗಡೆ ಲೆಕ್ಕ ಕೊಟ್ಟ ಸಿದ್ದರಾಮಯ್ಯ

06:10 AM Feb 06, 2018 | |

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಕೇಂದ್ರದ ಅನುದಾನದ ಬಳಕೆ ಕುರಿತು ಪದೇ ಪದೇ ಲೆಕ್ಕ ಕೇಳುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಜ್ಯಕ್ಕೆ 14 ನೇ ಹಣಕಾಸು ಆಯೋಗದಲ್ಲಿ ನಿಗದಿಪಡಿಸಿದ ಅನುದಾನಕ್ಕಿಂತಲೂ 10,500 ಕೋಟಿ ರೂ. ಕಡಿಮೆ ಅನುದಾನ ಬಿಡುಗಡೆ ಮಾಡಿದೆ ಎಂದು ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ನೀಡಬೇಕಾಗಿದ್ದ ಹಣದಲ್ಲಿ ಮೋದಿ ಸರ್ಕಾರ 10,500 ಕೋಟಿ ರೂ. ಕಡಿಮೆ ಅನುದಾನ ಬಿಡುಗಡೆ ಮಾಡಿದೆ. ಕೇಂದ್ರಕ್ಕೆ ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿ ಶೇ.9.47 ರಷ್ಟು ತೆರಿಗೆ ರಾಜ್ಯದಿಂದಲೇ ಸಂಗ್ರಹವಾಗುತ್ತದೆ. ಇದನ್ನಾಧರಿಸಿ 14 ನೇ ಹಣಕಾಸು ಆಯೋಗ ರಾಜ್ಯಕ್ಕೆ 2015 ರಿಂದ 18ರವರೆಗೆ 95 ಸಾವಿರ ಕೋಟಿ ರೂ.ಅನುದಾನ ನಿಗದಿಪಡಿಸಿದೆ. ರಾಜ್ಯದ ಪಾಲಿನ ಹಣದಲ್ಲಿ ಇಲ್ಲಿಯತನಕ 84.500 ಕೋಟಿ ರೂ. ಮಾತ್ರ ಬಂದಿದೆ. 10,500 ಕೋಟಿ ಖೋತಾ ಆಗಿದೆ. ಕೇಂದ್ರ ನಮಗೆ ಕೇವಲ ಶೇ.4.65 ರಷ್ಟು ಮಾತ್ರ ಅನುದಾನ ನೀಡುತ್ತಿದೆ ಎಂದರು.

ಕೇಂದ್ರದ ಅನುದಾನ ಬಿಡುಗಡೆ ವಿಚಾರದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿದ ವಿವರಣೆ ಸರಿಯಾಗಿದೆ. ಕೇಂದ್ರದ ಅನುದಾನ ಬಿಡುಗಡೆ ಬಗ್ಗೆ ಅಮಿತ್‌ ಶಾಗೆ ಸರಿಯಾದ ಲೆಕ್ಕ ಗೊತ್ತಿಲ್ಲ. ಅವರು 2 ಲಕ್ಷ ಕೋಟಿ ರೂ. ಕೊಟ್ಟಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜನರಲ್ಲಿ ಗೊಂದಲ ಉಂಟು ಮಾಡುವ ಉದ್ದೇಶದಿಂದ ಬಿಜೆಪಿ ನಾಯಕರು ಕೇಂದ್ರ ಅನುದಾನ ಕುರಿತು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿದರು.

ಬರ ಪರಿಹಾರ ಹಣ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ಗೆ 8195 ಕೋಟಿ, ತಮಿಳುನಾಡಿಗೆ 3751 ಕೋಟಿ, ಆಂಧ್ರಕ್ಕೆ 2430 ಕೋಟಿ, ರಾಜಸ್ಥಾನಕ್ಕೆ 2153 ಕೋಟಿ ಹಣ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಕೇವಲ 1435 ಕೋಟಿ ರೂ.ನೀಡಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next