Advertisement
ಡಿಸ್ಕವರಿ ಚಾನೆಲ್ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ನಿರೂಪಕ ಬೇರ್ ಗ್ರಿಲ್ಸ್ ಜತೆ ಹೆಜ್ಜೆ ಹಾಕುತ್ತಿರುವ ಮೋದಿ ಪ್ರಕೃತಿಯ ಜತೆಗಿನ ತಮ್ಮ ಅನುಭವ, ಅನುಭಾವವನ್ನು ಬಿಚ್ಚಿಡುತ್ತಿದ್ದರಲ್ಲದೆ, ನಿಸರ್ಗ ರಕ್ಷಣೆಯ ತಮ್ಮ ಕನಸನ್ನೂ ಹರವಿಡುತ್ತಿದ್ದರು.
ತಾನು ಬಾಲ್ಯದಲ್ಲಿ ಹೇಗೆ ಬೆಳೆದೆ ಎಂಬ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಸಾಬೂನು ಖರೀದಿ ಮಾಡಲು ನಮ್ಮ ಬಳಿ ಹಣವಿಲ್ಲದ್ದರಿಂದ ಮಣ್ಣನ್ನೇ ಸಾಬೂನಿನ ರೀತಿ ಬಳಸುತ್ತಿದ್ದೆವು. ನುಣುಪು ಮಣ್ಣನ್ನು ತೆಗೆದು ಅದನ್ನೇ ಮೈಗೆ ಬಳಿದುಕೊಂಡು ಸ್ನಾನ ಮಾಡುತ್ತಿದ್ದೆವು ಎಂದರು.
Related Articles
Advertisement
ಹುಲಿಯಿಂದ ರಕ್ಷಣೆಗೆ ಮೋದಿ ಹಾಗೂ ಬೇರ್ ಭರ್ಜಿಯನ್ನೂ ತಯಾರಿಸಿದರು. ಈ ವೇಳೆ ಮನೆ ತೊರೆದು ಹಿಮಾಲಯಕ್ಕೆ ತೆರಳಿದ ಬಗ್ಗೆಯೂ ಬೇರ್ ಬಳಿ ಹೇಳಿಕೊಂಡರು. ಅದೊಂದು ವಿಶೇಷ ಅನುಭವವಾಗಿತ್ತು. ಇಂದಿಗೂ ನನ್ನಲ್ಲಿ ಆ ಶಕ್ತಿ ಇದೆ ಎಂದರು. ಭರ್ಚಿಯನ್ನು ಇರಿದು ಪ್ರಾಣಿಯನ್ನು ಕೊಲ್ಲುವುದು ನನ್ನ ಸಂಸ್ಕಾರವಲ್ಲ. ಆದರೆ ನೀವು ಹೇಳಿದ್ದೀರಿ ಎಂದ ಮಾತ್ರಕ್ಕೆ ನಾನು ಹಿಡಿದುಕೊಳ್ಳುತ್ತೇನೆ ಎಂದು ಬೇರ್‌ಗೆ ಮೋದಿ ಹೇಳಿದರು. ಇಬ್ಬರೂ ಅಲ್ಲಿದ್ದ ನದಿಯನ್ನು ತಲುಪಿ, ಅದರ ದಂಡೆಯ ಮೇಲೆ ನಡೆದರು. ಈ ಸಮಯವನ್ನು ನಾನು ರಜೆ ಎಂದುಕೊಂಡರೆ, 18 ವರ್ಷಗಳಲ್ಲಿ ಮೊದಲ ಬಾರಿ ರಜೆ ತೆಗೆದುಕೊಂಡಿದ್ದೇನೆ ಎಂದ ಅವರು, ಅಲ್ಲೇ ನಿಂತು ತನ್ನ ತಾಯಿಯನ್ನು ನೆನಪಿಸಿಕೊಂಡರು. ಇಂದಿಗೂ ನನ್ನನ್ನು ಮಗುವಿನಂತೆಯೇ ಆಕೆ ನೋಡುತ್ತಾಳೆ ಎಂದರು. ಸಣ್ಣವನಿದ್ದಾಗ ಮನೆಯಲ್ಲಿ ಸ್ನಾನದ ಮನೆ ಇಲ್ಲದ್ದರಿಂದ ಕೊಳದಲ್ಲಿ ಸ್ನಾನ ಮಾಡುತ್ತಿದ್ದೆ. ಒಂದು ದಿನ ಸ್ನಾನ ಮಾಡುತ್ತಿದ್ದಾಗ ಮೊಸಳೆಯ ಮರಿ ಕಂಡು, ಅದನ್ನು ಹಿಡಿದುಕೊಂಡು ಮನೆಗೆ ಬಂದಿದ್ದೆ. ಆದರೆ ಹಾಗೆ ಮಾಡುವುದು ಪಾಪ, ಅದಕ್ಕೂ ಜೀವವಿರುತ್ತದೆ ಎಂದು ಅಮ್ಮ ಹೇಳಿದ್ದರಿಂದ ಅದನ್ನು ವಾಪಸ್ ಕೊಳದಲ್ಲಿ ಬಿಟ್ಟೆ ಎಂದು ಮೋದಿ ಹೇಳಿದರು. ನಾವು ನಿಸರ್ಗಕ್ಕೆ ಹೆದರಬಾರದು. ನನ್ನ ತಂದೆ ಪ್ರತಿ ಬಾರಿ ಮಳೆ ಆರಂಭವಾದಾಗ ಸಂಬಂಧಿಕರಿಗೆ ಪೋಸ್ಟ್ ಕಾರ್ಡ್‌ನಲ್ಲಿ ಬರೆದು ಸಂಭ್ರಮವನ್ನು ಹೇಳಿಕೊಳ್ಳುತ್ತಿದ್ದರು. ಅದು ಆಗ ನಮಗೆ ಅಚ್ಚರಿ ಎನಿಸುತ್ತಿತ್ತು. ಆದರೆ ಈಗ ನಿಸರ್ಗವನ್ನು ಅವರು ಪ್ರೀತಿಸುತ್ತಿದ್ದ ರೀತಿಯನ್ನು ಅದು ತಿಳಿಸುತ್ತಿದೆ ಎಂದರು. ನಿಸರ್ಗದ ಬಗ್ಗೆ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಪ್ರೀತಿ ಇತ್ತು. ನನ್ನ ಚಿಕ್ಕಪ್ಪ ಮರದ ಉರುವಲು ಮಾರಾಟದ ವ್ಯಾಪಾರ ನಡೆಸಲು ನಿರ್ಧರಿಸಿದ್ದರು, ಆದರೆ ಮರವನ್ನು ಕಡಿದು ಮಾರುವುದಕ್ಕೆ ಅಜ್ಜಿ ಬಿಡಲಿಲ್ಲ ಎಂದರು.
ಮೊದಲನೇ ದಿನವೇ ಬೇರ್, ಬಳ್ಳಿಗಳಿಂದ ಮಾಡಿಟ್ಟಿದ್ದ ತೆಪ್ಪವನ್ನು ಇಬ್ಬರೂ ಸೇರಿ ಎಳೆದು ನದಿಗೆ ಬಿಟ್ಟರು. ನಂತರ ಅದರಲ್ಲಿ ಇಬ್ಬರೂ ಕುಳಿತುಕೊಂಡು ನದಿಯ ಇನ್ನೊಂದು ಬದಿಗೆ ತೆರಳಿದರು. ಇಂಥ ತೆಪ್ಪದಲ್ಲಿ ನದಿಯನ್ನು ದಾಟಿದ ಪ್ರಧಾನಿ ಇತಿಹಾಸದಲ್ಲಿ ನೀವೊಬ್ಬರೇ ಇರಬೇಕು ಎಂದು ಬೇರ್ ಹೇಳಿದ್ದಕ್ಕೆ, ಇದೇನೂ ಹೊಸದು ಎನಿಸುವುದಿಲ್ಲ. ನಾನು ಈ ರೀತಿಯೇ ಬೆಳೆದಿದ್ದೇನೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದ ಕೊನೆಯ ಚರಣದಲ್ಲಿ ನದಿಯ ಇನ್ನೊಂದು ಭಾಗದಲ್ಲಿ ಬಂದು ಕುಳಿತು, ಚಹಾ ಸೇವಿಸುತ್ತಾ ಇಬ್ಬರೂ ಮಾತನಾಡಿದರು. ಈ ವೇಳೆ ತುಳಸಿಯ ಮಹತ್ವವನ್ನೂ ಬೇರ್‌ಗೆ ಮೋದಿ ಹೇಳಿದರು. ಭಾರತವನ್ನು ಸ್ವಚ್ಛಗೊಳಿಸುವ ಕುರಿತು ಮಾತನಾಡಿದರು. ಭಾರತೀಯರಿಗೆ ವೈಯಕ್ತಿಕ ಸ್ವಚ್ಛತೆ ತಿಳಿದಿದೆ. ಆದರೆ ಸಾಮಾಜಿಕ ಸ್ವಚ್ಛತೆ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದರು. ಕನ್ನಡದಲ್ಲೂ ಕಾರ್ಯಕ್ರಮದ ಧ್ವನಿ ಪ್ರಸಾರವಾಯಿತು. ಮೋದಿ ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಬೇರ್ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಇಬ್ಬರ ಮಧ್ಯೆ ಯಾವುದೇ ದುಭಾಷಿಗಳು ಇರಲಿಲ್ಲ.
ಈ ಕಾರ್ಯಕ್ರಮ ನನಗೆ ಹೊಸ ರೋಮಾಂಚಕ ಅನುಭವ ನೀಡಿದೆ. ನನಗೆ ನನ್ನ ಹಿಮಾಲಯದ ನೆನಪುಗಳ ಸುರುಳಿ ಬಿಚ್ಚಿತು. ನದಿ, ಕೊಳ, ಕಾಡು, ಧ್ಯಾನ… ಎಲ್ಲವೂ ನೆನಪಾದವು.ಪ್ರಧಾನಿ ಮೋದಿ