Advertisement
ಸಚಿವ ಸಂಪುಟ ಪುನಾರಚನೆ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಒಟ್ಟು 1.11 ಕೋಟಿ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ದಿನಬಳಕೆ ವಸ್ತುಗಳ ದರ ಹೆಚ್ಚಳಕೆಕ ಅನುಗುಣವಾಗಿ ಈ ಹಿಂದೆ ಶೇ.4ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಹೊಸ ದರ ಇದೇ ಜು.1ರಿಂದ ಅನ್ವಯವಾಗಲಿದೆ. ಈ ಮೂಲಕ ಸರ್ಕಾರಕ್ಕೆ ವಾರ್ಷಿಕ 3,068 ಕೋಟಿ ಹಾಗೂ 2017-18ನೇ ಸಾಲಿನಲ್ಲಿ ಸುಮಾರು 2,045 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಗ್ರಾಚುಟಿ ಮಸೂದೆ ತಿದ್ದುಪಡಿಯನ್ನು ಅಂಗೀಕರಿಸಿರುವ ಸಂಪುಟ, ತೆರಿಗೆ ರಹಿತ ಗ್ರಾಚುಟಿ ಮಿತಿಯನ್ನು ದುಪ್ಪಟ್ಟು ಮಾಡಿ, 20 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ತಿದ್ದುಪಡಿ ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ವಲಯ ಮತ್ತು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳ, ಪಿಂಚಣಿ ನಿಯಮಗಳ ವ್ಯಾಪ್ತಿಗೆ ಒಳಪಡದ ನೌಕರರ ತೆರಿಗೆ ರಹಿತ ಗ್ರಾಚುಟಿಯ ಗರಿಷ್ಠ ಮಿತಿ 20 ಲಕ್ಷ ರೂ. ಆಗಿರಲಿದೆ.