ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ತಮ್ಮನ್ನು ಹೊಲಿಸಿಕೊಂಡು ಮತ ನೀಡುವಂತೆ ಕಾಂಗ್ರೆಸ್ ಸಂಸದೀಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದ ನಂತರ ಕಮಲಾಪುರದಲ್ಲಿ ಏರ್ಪಡಿಸಿದ್ದ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಮತ್ತು ಕೇಂದ್ರ ಸಚಿವನಾಗಿ ಕಲಬುರಗಿಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮಾಡಿದ ಕೆಲಸಕ್ಕೆ ಮತದ ಕೂಲಿ ಕೇಳುತ್ತಿದ್ದೇನೆ ಎಂದರು.
ಯುಪಿಎ ಸರ್ಕಾರದಲ್ಲಿ ಸಚಿವನಾಗಿದ್ದಾಗ ಸೊಲ್ಲಾಪುರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಐಎಸ್‌ಐ ಆಸ್ಪತ್ರೆ, ಜಯದೇವ ಆಸ್ಪತ್ರೆ, ಟೆಕ್ಸ್‌ಟೆಲ್ ಪಾರ್ಕ್, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಕಲಬುರಗಿಯ ಔದ್ಯೋಗಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಗಾಗಿ ಸತತವಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಮುಖಂಡ, ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿ, ಹೈ-ಕ ಭಾಗದ ಅಭಿವೃದ್ಧಿಗಾಗಿ ಖರ್ಗೆ ಅವರು
ಶ್ರಮಿಸಿದ್ದಾರೆ. ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನ 371 ಕಲಂ ತಿದ್ದುಪಡಿಗಾಗಿ ಖರ್ಗೆ ಅವರ ಹೋರಾಟವನ್ನು ಮತದಾರರ ಮರೆಯಬಾರದು ಎಂದು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಎಐಸಿಸಿ ಕಾರ್ಯದರ್ಶಿ ಹನಮಂತರಾವ, ಮುಖಂಡರಾದ ಬಾಬುರಾವ ಚವ್ಹಾಣ, ವಿಜಯಕುಮಾರ ರಾಧಾಕೃಷ್ಣ, ಮಲ್ಲಿನಾಥ ಪಾಟೀಲ ಸ್ವಂತ, ಜಗನ್ನಾಥ ಗೋದಿ, ಜಲಜಾ ನಾಯಕ, ವೈಜನಾಥ ತಡಕಲ್, ಶರಣಗೌಡ ಪಾಟೀಲ ವಿಕೆ ಸಲಗರ, ಶರಣಬಸಪ್ಪ ಗುಂಡಪ್ಪ ಹಾಗರಗಿ, ಚಿರಂಬರರಾವ ಮರಗುತ್ತಿ ಇದ್ದರು.