Advertisement

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

09:28 AM May 09, 2024 | Team Udayavani |

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದೆ. ಸಣ್ಣಪುಟ್ಟ ಗೊಂದಲ, ಅವಾಂತರ, ತಿಕ್ಕಾಟಗಳ ಹೊರತಾಗಿ ರಾಜ್ಯದಲ್ಲಿ ಮತದಾನ ಬಹುತೇಕ ಯಶಸ್ವಿಯಾಗಿ ನಡೆದಿದೆ. ಮತದಾನ ಪ್ರಮಾಣದಲ್ಲಿ ಕೊಂಚ ಮಟ್ಟಿನ ಹೆಚ್ಚಳ ದಾಖಲಾಗಿರುವುದು ಸಮಾಧಾನಕರ ಸಂಗತಿಯೇ. ಕಳೆದೆರಡು ತಿಂಗಳುಗಳಿಂದ ಇಡೀ ಚುನಾವಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಚುನಾವಣ ಆಯೋಗ ಮತ್ತು ರಾಜ್ಯದ ಆಡಳಿತ ವ್ಯವಸ್ಥೆ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

Advertisement

ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಅತ್ಯಂತ ಸುಗಮ ಮತ್ತು ಸುಲಲಿತವಾಗಿ ನಡೆಯುವಲ್ಲಿ ಚುನಾವಣ ಆಯೋಗದ ಕಾರ್ಯ ಶ್ಲಾಘನೀಯ. ಅಧಿಕಾರಿಗಳು, ಸರಕಾರಿ ಸಿಬಂದಿ, ಭದ್ರತಾ ಸಿಬಂದಿ ಆದಿಯಾಗಿ ಎಲ್ಲರೂ ತಮ್ಮತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ರಾಜ್ಯದ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ. ಇನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಮಾಜಮುಖೀ ಧೋರಣೆಗೆ ಶಹಭಾಸ್‌ ಹೇಳಲೇಬೇಕು. ರಾಜ್ಯದಲ್ಲಿ ಮತದಾನ ಪ್ರಮಾಣ ಶೇ. 70ರ ಗಡಿ ತಲುಪುವಲ್ಲಿ ಚುನಾವಣ ಆಯೋಗ ಹಮ್ಮಿಕೊಂಡ ಕಾರ್ಯಕ್ರಮಗಳು ಹಾಗೂ ಮತದಾರರಿಗೆ ಅವರ ಹಕ್ಕಿನ ಮಹತ್ವ, ಜವಾಬ್ದಾರಿಗಳನ್ನು ನೆನಪಿಸಿಕೊಡುವ ಜತೆಯಲ್ಲಿ ಈ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳತ್ತ ಮುಖ ಮಾಡುವಂತೆ ಪ್ರೇರಣೆ ನೀಡುವ ಮೂಲಕ ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿರುವುದು ಕೂಡ ಮತದಾನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಕಾರಣೀಭೂತವಾಗಿವೆ. ಒಟ್ಟಿನಲ್ಲಿ ಸಾಮೂಹಿಕ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಇವೆಲ್ಲದರ ಹೊರತಾಗಿಯೂ ಇನ್ನೂ ಶೇ. 30ರಷ್ಟು ಅರ್ಹ ಮತದಾರರು ತಮ್ಮ ಹಕ್ಕು ಚಲಾವಣೆಯಿಂದ ದೂರವುಳಿದಿರುವುದರತ್ತ ಇಡೀ ಸಮಾಜ ಒಂದಿಷ್ಟು ಯೋಚಿಸಲೇಬೇಕು. ಇವರೆಲ್ಲರೂ ಮತದಾನ ದಿನದಂದು ಮನೆಯಲ್ಲಿಯೇ ಕುಳಿತಿದ್ದರು ಎಂಬ ನಿರ್ಧಾರಕ್ಕೆ ಬರಲಾಗದು. ಅದೆಷ್ಟೋ ಹೆಸರುಗಳು 2-3 ಕಡೆ ಮತದಾರರ ಪಟ್ಟಿಯಲ್ಲಿ ನಮೂದಾಗಿವೆ. ಮೃತಪಟ್ಟವರ ಹೆಸರುಗಳು ಈಗಲೂ ಪಟ್ಟಿಯಲ್ಲಿ ಹಾಗೆಯೇ ಉಳಿದಿರುವ ಸಾಧ್ಯತೆ ಇದೆ. ಪ್ರತೀ ಚುನಾವಣೆಯಂತೆ ಈ ಬಾರಿಯೂ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಹಾಗೆಂದು ನಗರವಾಸಿಗಳು ಹಕ್ಕು ಚಲಾವಣೆ ಬಗೆಗೆ ನಿರಾಸಕ್ತಿ ಹೊಂದಿದ್ದಾರೆ ಎಂಬ ನಿರ್ಧಾರಕ್ಕೆ ಬರುವುದು ತುಸು ಅವಸರದ ತೀರ್ಮಾನವಾದೀತು. ಕಾರಣ ನಗರವಾಸಿಗಳಲ್ಲಿ ವಲಸಿಗರ ಸಂಖ್ಯೆ ಅಧಿಕವಾಗಿರುವುದರಿಂದ ಪ್ರತೀ ಬಾರಿ ಚುನಾವಣೆ ಎದುರಾದಾಗಲೆಲ್ಲ ತಮ್ಮ ಊರಿಗೆ ತೆರಳಿ ಅಲ್ಲಿ ಹಕ್ಕು ಚಲಾಯಿಸುತ್ತಾರೆ. ಇತ್ತ ನಗರಗಳಲ್ಲಿನ ಮತದಾರರ ಪಟ್ಟಿಯಲ್ಲೂ ಇವರ ಹೆಸರಿರುವ ಸಾಧ್ಯತೆಗಳಿವೆ. ಮುಂದಿನ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಆಯೋಗ ಇತ್ತ ಹೆಚ್ಚು ಗಮನ ಹರಿಸಿದ್ದೇ ಆದಲ್ಲಿ ನಗರವಾಸಿಗಳು ತಮ್ಮ ಮೇಲಣ ಆರೋಪದಿಂದ ಮುಕ್ತರಾದಾರೇನೊ?

ಇಡೀ ಚುನಾವಣ ಪ್ರಕ್ರಿಯೆಗೆ ಬಲುದೊಡ್ಡ ಕಳಂಕವಾಗಿರುವುದು ಚುನಾವಣ ಅಕ್ರಮಗಳು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಚುನಾವಣ ಅಕ್ರಮ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ನಗದು, ಮದ್ಯ, ಮಾದಕ ವಸ್ತು, ವಜ್ರ, ಚಿನ್ನ, ಬೆಳ್ಳಿ ಸಹಿತ ಇತರ ಉಡುಗೊರೆ ವಸ್ತುಗಳೂ ಸೇರಿದಂತೆ ಒಟ್ಟು 557.69 ಕೋಟಿ ರೂ. ಮೌಲ್ಯದ ಅಕ್ರಮಗಳನ್ನು ಪತ್ತೆ ಹಚ್ಚಲಾಗಿದೆ. ಅಷ್ಟು ಮಾತ್ರವಲ್ಲದೆ ಚುನಾವಣ ಅಕ್ರಮಗಳಿಗೆ ಸಂಬಂಧಿಸಿ 2,362 ಎಫ್ಐಆರ್‌, ಅಬಕಾರಿ ಕಾಯ್ದೆಯ ಘೋರ ಉಲ್ಲಂಘನೆ ಪ್ರಕರಣದಡಿ 3,435 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದ್ದು, ಚುನಾವಣ ಅಕ್ರಮ, ಮತದಾರರಿಗೆ ಆಮಿಷವೊಡ್ಡುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ನಷ್ಟು ಬಿಗಿ ಕಾನೂನು ಕ್ರಮಗಳನ್ನು ಕೈಗೊಳ್ಳುವ ಆವಶ್ಯಕತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next