Advertisement

ಬೀದರಗೆ ಮೋದಿ ಆಗಮನ: ಭರದ ಸಿದ್ಧತೆ

11:34 AM Oct 27, 2017 | Team Udayavani |

ಬೀದರ: ಬೀದರ- ಕಲಬುರಗಿ ರೈಲು ಮಾರ್ಗ ಲೋಕಾರ್ಪಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಪ್ರಧಾನಿ ಅವರ ಭದ್ರತೆ ಜವಾಬ್ದಾರಿ ಹೊತ್ತಿರುವ ಎಸ್‌ಪಿಜಿ ಪಡೆ (ವಿಶೇಷ ಭದ್ರತಾ ಪಡೆ)ಯ ಅಧಿಕಾರಿಗಳು ಈಗಾಗಲೇ ಬೀದರಗೆ ಆಗಮಿಸಿದ್ದು, ಪ್ರಧಾನಿ ಭೇಟಿ ನೀಡುವ ರೈಲ್ವೆ ನಿಲ್ದಾಣ ಮತ್ತು ಬಹಿರಂಗ ಸಭೆ ನಡೆಯುವ ನೆಹರು ಕ್ರೀಡಾಂಗಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತಗೆ ಈ ಪ್ರದೇಶಗಳ ಸುತ್ತಮುತ್ತಲಿನ ಭಾಗವನ್ನು ಸಹ ಪರಿಶೀಲನೆ ಮಾಡಿ ಭದ್ರತಾ ವ್ಯವಸ್ಥೆಯನ್ನು ಗಮನಿಸಿದ್ದಾರೆ.

Advertisement

ನಗರ ಪ್ರವೇಶದಲ್ಲಿ ನಾಕಾ ಬಂದಿ: ಪ್ರಧಾನಿ ಪ್ರವಾಸದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ನಾಲ್ಕು ದಿನಗಳ ಮುಂಚೆಯೇ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರ ಪ್ರವೇಶದ 9 ಸ್ಥಳಗಳಲ್ಲಿ ದಿನದ 24 ಗಂಟೆಗಳ ಕಾಲ ನಾಕಾ ಬಂದಿ ಹಾಕಲಾಗಿದ್ದು, ಬೀದರಗೆ ಪ್ರವೇಶಿಸುವ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ. ಎಂಟ್ರಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ಸಂಖ್ಯೆ ಮತ್ತು ಸವಾರರ ವಿಳಾಸ ದಾಖಲಿಸಿಕೊಳ್ಳಲಾಗುತ್ತಿದೆ.  ರೈಲು ಮಾರ್ಗ ಉದ್ಘಾಟನೆ ಹಿನ್ನೆಲೆಯಲ್ಲಿ ಈಗಾಗಲೇ ನಿಲ್ದಾಣದಲ್ಲಿಯೂ ಭದ್ರತೆ ವ್ಯವಸ್ಥೆ ಮೇಲೆ ನಿಗಾ ವಹಿಸಲಾಗಿದೆ. ಪೊಲೀಸ್‌ ಅಧಿಕಾರಿಗಳ ತಂಡ, ಶ್ವಾನ ದಳದ ಮೂಲಕ ಪ್ರಯಾಣಿಕರ ಪರಿಶೀಲನೆ ಮಾಡಲಾಗುತ್ತಿದೆ. ರೈಲ್ವೆ ಹಳಿಗಳ ಜೋಡಣೆ ಕೆಲಸದ ಜತೆಗೆ ರೈಲ್ವೆ ನಿಲ್ದಾಣದಲ್ಲಿ ಸ್ವತ್ಛತಾ ಕಾರ್ಯಗಳು ಭರದಿಂದ ಸಾಗಿವೆ. ನಿಲ್ದಾಣದ ಹೊರಗೆ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿರುವುದರಿಂದ ಡಾಂಬರೀಕರಣ ಕೆಲಸಗಳು ಚುರುಕುಗೊಂಡಿವೆ. ನೆಹರು ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಗುರುವಾರ ಸಂಸದ ಭಗವಂತ ಖೂಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ರೈಲ್ವೆ ನಿಲ್ದಾಣದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಮುಗಿಸಿದ ನಂತರ ಮೋದಿ ಅವರು ನೆಹರು ಕ್ರೀಡಾಂಗಣದಲ್ಲಿ ಜರುಗುವ
ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಹಾಗಾಗಿ ಕ್ರೀಡಾಂಗಣ ಪಕ್ಕದಲ್ಲಿರುವ ಸಾಯಿ ಶಾಲಾ ಆವರಣದಲ್ಲಿ ಹಾಕಲಾಗಿದ್ದ 35ಕ್ಕೂ ಹೆಚ್ಚು ಪಟಾಕಿ ಅಂಗಡಿಗಳನ್ನು ಪೊಲೀಸರು ಭದ್ರತೈ ದೃಷ್ಟಿಯಿಂದ ಗುರುವಾರ ತೆರವುಗೊಳಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಾಯಿ ಶಾಲಾ ಆವರಣದಲ್ಲಿ ಪಟಾಕಿ ಮಳಿಗೆ ಸ್ಥಾಪಿಸಿ ಒಂದು ತಿಂಗಳವರೆಗೆ (ಹುಣ್ಣಿಮೆವರೆಗೆ) ನಡೆಸಲಾಗುತ್ತಿತ್ತು. ಆದರೆ, ಈಗ ದೀಢೀರನೆ ಅಂಗಡಿ ಎತ್ತಂಗಡಿ ಮಾಡಿರುವುದು ಮಾಲೀಕರಲ್ಲಿ ತಳಮಳ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next