ಪಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಐನೂರು ಕೋಟಿ ರೂ.ಗಳ ತತ್‌ಕ್ಷಣದ ಪರಿಹಾರವನ್ನು ಘೋಷಿಸಿದರು.
ಪ್ರವಾಹದಲ್ಲಿ ಜೀವ ಕಳೆದುಕೊಂಡವರ ಕುಟುಂಬಕ್ಕೆ ಘೋಷಿಸಲಾಗಿರುವ ತಲಾ 2 ಲಕ್ಷ ರೂ. ಪರಿಹಾರಕ್ಕೆ ಹೊರತಾಗಿ ಈ 500 ಕೋಟಿ ರೂ. ಪರಿಹಾರವನ್ನು ಮೋದಿ ಘೋಷಿಸಿದ್ದಾರೆ.
ಪ್ರವಾಹದಿಂದಾಗಿ ಉಂಟಾಗಿರುವ ನಾಶ ನಷ್ಟವನ್ನು ಅಂದಾಜಿಸುವ ಸಲುವಾಗಿ ಶೀಘ್ರವೇ ಕೇಂದ್ರ ತಂಡವೊಂದನ್ನು ಬಿಹಾರಕ್ಕೆ ಕಳುಹಿಸಲಾಗುವುದು ಎಂದು ಮೋದಿ ಪ್ರಕಟಿಸಿದರು.
ಬೆಳೆ ನಾಶವನ್ನು ಅಂದಾಜಿಸಲು ತುರ್ತಾಗಿ ಅಂದಾಜಿಸಿ ರೈತರಿಗೆ ತತ್‌ಕ್ಷಣದ ಪರಿಹಾರ ದೊರಕಿಸಲು ತಮ್ಮ ಸಿಬಂದಿಗಳನ್ನು ಕಳುಹಿಸುವಂತೆ ಮೋದಿ ವಿಮಾ ಕಂಪೆನಿಗಳಿಗೆ ಸೂಚಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪೂರ್ಣಿಯಾದಲ್ಲಿ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕದಲ್ಲಿ ಈ ನಿರ್ಧಾರಗಳು ಪ್ರಕಟಗೊಂಡವು.
ಚುನಾಪುರದಲ್ಲಿ ವಾಯು ಪಡೆಯ ವಿಮಾನ ನಿಲ್ದಾಣದಲ್ಲಿ ಪ್ರವಾಹ ವೀಕ್ಷಣೆ ಬಳಿಕ ಸಭೆ ನಡೆಸಿದ ಪ್ರಧಾನಿ ಮೋದಿ ಅನಂತರ ದಿಲ್ಲಿಗೆ ಮರಳಿದರು. ಸಭೆಯಲ್ಲಿ ಪ್ರಧಾನಿ ಮೋದಿ ಅವರು ಬಿಹಾರ ಸರಕಾರಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಘೋಷಿಸಿದರು.