ಉಡುಪಿ/ಮಂಗಳೂರು: ಹನುಮಂತ ದೇವರು ಮತ್ತು ಬಜರಂಗದಳವನ್ನು ಸಮೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಎಐಸಿಸಿ ವಕ್ತಾರ ಪ್ರೊ| ಗೌರವ್ ವಲ್ಲಭ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಕುರಿತು ಉಲ್ಲೇಖೀಸಲಾಗಿದೆ. ಹಾಗಾದರೆ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವುದು ತಪ್ಪೇ ಎಂದು ಪ್ರಶ್ನಿಸಿದರು.
ಪ್ರಧಾನಿಯವರು ಕರ್ನಾಟಕಕ್ಕೆ ಬಂದ ಸಂದರ್ಭಗಳಲ್ಲಿ ಇಲ್ಲಿನ ಸರಕಾರದ ಶೇ. 40 ಕಮಿಷನ್, ಮುಖ್ಯಮಂತ್ರಿಯವರು ಕಮಿಷನ್ ಏಜೆಂಟ್ ಆಗಿರುವುದು, ನೇಮಕಾತಿ ಹಗರಣಗಳ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅದ್ಯಾವುದನ್ನು ಮಾತನಾಡದೇ ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
ಕನ್ನಡಿಗರಿಗೆ ಅವಮಾನವಾದ ಸಂದರ್ಭದಲ್ಲಿ ಏನೂ ಮಾತನಾಡಿಲ್ಲ, ನಂದಿನಿ ಹಾಲಿನ ವಿವಾದದ ಬಗ್ಗೆಯೂ ಚಕಾರ ಎತ್ತಿಲ್ಲ. ಅಭಿವೃದ್ಧಿ, ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾವಿಸಿಲ್ಲ. ಕಾಂಗ್ರೆಸ್‌ನ ಪ್ರಣಾಳಿಕೆ ಬಗ್ಗೆ ವಿವಾದ ಸೃಷ್ಟಿಸುವ ಹುನ್ನಾರ ಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಮತದಾರರು ಮೇ 10ರಂದು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಬಜರಂಗದಳದ ಕಾರ್ಯಕರ್ತನೊಬ್ಬ ಕರ್ನಾಟಕದಲ್ಲಿ ದಲಿತ ಯುವಕನ ಕೊಲೆ ಮಾಡಿದ ನಿದರ್ಶನವಿದೆ. ದಲಿತರು ಹಿಂದೂಗಳಲ್ಲವೇ? ಈ ಬಗ್ಗೆ ಮೋದಿ ಮೌನವಾಗಿರುವುದು ಏಕೆ? ಅವರ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ ಏಕೆ ಎಂದು ಪ್ರಶ್ನಿಸಿದರು.
ಎಐಸಿಸಿ ವಕ್ತಾರ ಚರಣ್ ಸಿಂಗ್ ಸಪ್ರಾ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖ ರಾದ ವಿನಯ್ ರಾಜ್, ಎಂ.ಎ. ಗಫೂರ್, ರಮೇಶ್ ಕಾಂಚನ್ ಉಪಸ್ಥಿತರಿದ್ದರು.