ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಕಾಂಗ್ರೆಸ್‌ನಲ್ಲೀಗ ನಿಷ್ಠಾವಂತರಿಗೆ ಬೆಲೆ ಇಲ್ಲ. ಪಕ್ಷದ ಕೆಲವು ಹಿರಿಯ ಮುಖಂಡರ ವರ್ತನೆ ಮನಸ್ಸಿಗೆ ನೋವು ತಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಪ್ರಧಾನ
ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅ.1ರಂದು ಮುಂದಿನ ನಿಲುವು ಪ್ರಕಟಿಸುವುದಾಗಿ’ ಹೇಳಿದರು.
ಸೋಲಿಗೆ ಕಾರಣ: “ನನ್ನ ಬೆಳವಣಿಗೆಯನ್ನು ಸಹಿಸದವರು ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದರು. ಅವರೇ ಈಗ ಮತ್ತೆ ನನ್ನ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ನಾನು ಜಗ್ಗುವುದಿಲ್ಲ. ನಾನೇನು ಎಂಬುದನ್ನು ತೋರಿಸುತ್ತೇನೆ’ ಎಂದರು.
ಮುಂದಿನ ತಿಂಗಳು ಘೋಷಣೆ: ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ನನ್ನನ್ನು ಸಂಪರ್ಕಿಸಿ, ಮಾತುಕತೆ ನಡೆಸಿದ್ದಾರೆ. ಮುಂದಿನ ತಿಂಗಳು ನನ್ನ ರಾಜಕೀಯ ನಡೆ ಘೋಷಿಸುವುದಾಗಿ ಹೇಳಿದರು .