Advertisement

ಸಾಹಿತಿ ಎಚ್‌ಎಸ್‌ವಿ ಈಗ ಹೀರೋ

11:14 AM Dec 26, 2019 | Lakshmi GovindaRaj |

ಸಾಹಿತಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು “ಹಸಿರು ರಿಬ್ಬನ್‌’ ಚಿತ್ರದ ಮೂಲಕ ನಿರ್ದೇಶಕರಾಗಿದ್ದು ಗೊತ್ತೇ ಇದೆ. ಆ ಚಿತ್ರದ ಬಳಿ ಎಚ್‌.ಎಸ್‌.ವಿ. ಬೇರೆ ಯಾವ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಅವರು ನಿರ್ದೇಶನದ ಬದಲು ಬಣ್ಣ ಹಚ್ಚುವ ಮೂಲಕ ಕಲಾವಿದರಾಗಿದ್ದಾರೆ. ಹೌದು, ಈಗಾಗಲೇ ಬಿಡುಗಡೆಗೆ ರೆಡಿಯಾಗಿರುವ “ಅಮೃತವಾಹಿನಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Advertisement

ಒಂದರ್ಥದಲ್ಲಿ ಆ ಚಿತ್ರದ ಹೀರೋ ಅವರೇ. ಈ ಚಿತ್ರಕ್ಕೆ ನರೇಂದ್ರಬಾಬು ನಿರ್ದೇಶಕರು. ಸಂಪತ್‌ಕುಮಾರ್‌ ಹಾಗು ಪದ್ಮನಾಭ್‌ ನಿರ್ಮಾಪಕರು. ಮೊದಲ ಸಲ ಬಣ್ಣ ಹಚ್ಚುವ ಮೂಲಕ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಪಾತ್ರ ಕುರಿತು ಹೇಳುವುದು ಹೀಗೆ. “ಏನೋ ಒಂದು ಸಾಹಸವಿದು. ನನ್ನ 76ನೇ ವಯಸ್ಸಲ್ಲಿ ಬಣ್ಣ ಹಚ್ಚಿದ್ದೇನೆ. ಇದಕ್ಕೆ ಮುಖ್ಯ ಕಾರಣ, ನಿರ್ಮಾಪಕ ಸಂಪತ್‌ಕುಮಾರ್‌ ಹಾಗು ನಿರ್ದೇಶಕ ಬಾಬು.

ಒಂದು ದಿನ ಮನೆಗೆ ಬಂದು, ಸಿನಿಮಾ ಮಾಡ್ತಾ ಇದ್ದೇವೆ. ವಯಸ್ಸಾದವರ ಕಥೆ ಇದು. ನಿಮಗಿಂತ ಚೆನ್ನಾಗಿ ವಯಸ್ಸಾದವರು ಯಾರೂ ಇಲ್ಲ. ಹಾಗಾಗಿ ಆ ಪಾತ್ರಕ್ಕೆ ನೀವೇ ಸರಿಹೊಂದುತ್ತೀರಿ ಮಾಡಬೇಕು ಅಂದರು. ಆಗ ನಾನು, ನನಗೆ ಅಭಿನಯ ಬರಲ್ಲ ಬೇಡ ಅಂತ ಕೈ ಮತ್ತು ತಲೆ ಅಲ್ಲಾಡಿಸುತ್ತಿದ್ದೆ. ಆದರೆ, ನನ್ನ ಕಾಲು ಆಲ್ಲಾಡುತ್ತಿರಲಿಲ್ಲ. ಬಲವಾಗಿ ನನ್ನ ಕಾಲು ಹಿಡಿದು ಮಾಡಲೇಬೇಕು ಅಂದರು. ಅನಿವಾರ್ಯ ಅದೇನ್‌ ಮಾಡ್ತೀರೋ ಮಾಡಿ ಅಂದೆ. ಅವರ ಪ್ರೀತಿಗೆ ಒಪ್ಪಿ ಮಾಡಿದ ಚಿತ್ರವಿದು.

ಅಭಿನಯ ಕಷ್ಟದ ಕೆಲಸ. ನನ್ನನ್ನು ಮರೆತು ಇನ್ನೊಬ್ಬರು ಆಗುವಂತಹ ಪ್ರಕ್ರಿಯೆ ಅದು. ಆದರೂ, ನಿರ್ದೇಶಕರು ನನ್ನಿಂದ ಕೆಲಸ ತೆಗೆಸಿದ್ದಾರೆ. ಇಲ್ಲಿ ಛಾಯಾಗ್ರಾಹಕ ಗಿರಿಧರ್‌ ದಿವಾನ್‌ ನನ್ನನ್ನು ಅಷ್ಟೇ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಚಿತ್ರಕ್ಕೆ ಪೂರಕವಾಗಿರುವ ಗೀತ ಸಾಹಿತ್ಯ ನಾನೇ ಬರೆದಿದ್ದೇನೆ. ಉಪಾಸನ ಮೋಹನ್‌ ಸಂಗೀತವಿದೆ. ಇಲ್ಲಿ ನಿಜ ಅರ್ಥದ ಸಾಹಿತ್ಯವಿದೆ. ಅದಕ್ಕೆ ತಕ್ಕಂತಹ ರಾಗ ಸಂಯೋಜನೆ ಇದೆ. ಪಾತ್ರ ಕುರಿತು ಹೇಳುವುದಾದರೆ, ನಾನಿಲ್ಲಿ ವೃದ್ಧನ ಪಾತ್ರ ಮಾಡಿದ್ದೇನೆ. ಸೊಸೆ, ಮಗ ಮತ್ತು ನಾನು ಚಿತ್ರದ ಹೈಲೈಟ್‌.

ಇವರ ಸುತ್ತ ಸಾಗುವ ಕಥೆಯಲ್ಲಿ ವೃದ್ಧನೊಬ್ಬನ ನೋವು-ನಲಿವು ಇದೆ. ವೃದ್ಧರು ಅನುಭವಿಸುವ ಸ್ಥಿತಿಗತಿಗಳ ವಿಷಯವಿದೆ. ಸೊಸೆ ಹಾಗು ಮಾವನ ನಡುವಿನ ಸಂಘರ್ಷ ಹೇಗೆಲ್ಲಾ ಇರುತ್ತೆ ಎಂಬುದನ್ನು ನೈಜವಾಗಿರುವಂತೆಯೇ ಚಿತ್ರಿತಗೊಂಡಿದೆ. ಇದು ರಾಘವೇಂದ್ರ ಪಾಟೀಲ ಅವರು ಬರೆದ ಕಥೆ. ಯಾವುದೇ ಡ್ಯಾನ್ಸು, ಫೈಟು, ಲಾಂಗು-ಮಚ್ಚುಗಳ ಆರ್ಭಟವಿಲ್ಲದ ಒಂದು ಅರ್ಥಪೂರ್ಣ ಚಿತ್ರವಿದು’ ಎಂಬುದು ಎಚ್‌ಎಸ್‌ವಿ ಅವರ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next