Advertisement

ನರಿಮೊಗರು: ರೈಲು ನಿಲ್ದಾಣವಿದ್ದರೂ ಪ್ರಯೋಜನವಿಲ್ಲ!

10:17 PM May 21, 2019 | mahesh |

ನರಿಮೊಗರು: ಪುತ್ತೂರು ತಾಲೂಕು ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ನರಿಮೊಗರು ರೈಲು ನಿಲ್ದಾಣವು ಸಿಗ್ನಲ್‌ ವ್ಯವಸ್ಥೆ ಸಹಿತ ಪೂರ್ಣಕಾಲಿಕ ಸ್ಟೇಷನ್‌ ಮಾಸ್ಟರ್‌ ಇರುವ ರೈಲು ನಿಲ್ದಾಣವಾದರೂ ಪ್ರಯಾಣಿಕರ ಸ್ಪಂದನೆ ಇಲ್ಲ.

Advertisement

ಈ ನಿಲ್ದಾಣದಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್‌ ರೈಲಿಗೆ ಮಾತ್ರ ನಿಲುಗಡೆ ಇದೆ. ದೂರ ಪ್ರಯಾಣದ ಪ್ರಯಾಣಿಕ ರೈಲುಗಳಿಗಿಲ್ಲ. ನಿಲ್ದಾಣದ ಹೆಸರು ನರಿಮೊಗರು ಆದರೂ ರೈಲ್ವೇ ನಿಲ್ದಾಣ ಇರುವುದು ಸರ್ವೆಯಲ್ಲಿ. ಮಂಗಳೂರು- ಹಾಸನ ರೈಲು ಮಾರ್ಗ ನಿರ್ಮಾಣ ಸಂದರ್ಭ ಮೀಟರ್‌ಗೆàಜ್‌ ಹಳಿ ಇತ್ತು. 1974ರಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್‌ ರೈಲಿನ ಓಡಾಟ ಆರಂಭವಾಯಿತು.

ಆ ಕಾಲದಲ್ಲಿ ಕಲ್ಲಿದ್ದಲು ಬಳಸಿ ಚಾಲನೆ ಮಾಡುವ ರೈಲು ಎಂಜಿನ್‌ ಬಳಕೆಯಲ್ಲಿತ್ತು. ಈ ರೈಲು ಇಂಜಿನ್‌ಗಳಿಗೆ ಅಲ್ಲಲ್ಲಿ ನೀರು ತುಂಬಿಸುವ ವ್ಯವಸ್ಥೆ ಬೇಕಾಗಿತ್ತು. ಈ ಕಾರಣದಿಂದ ಪುತ್ತೂರು-ಸುಬ್ರಹ್ಮಣ್ಯ ನಡುವೆ ರೈಲು ನಿಲ್ದಾಣದಲ್ಲಿ ಎಂಜಿನ್‌ಗಳಿಗೆ ನೀರು ತುಂಬಿಸುವ ಅಗತ್ಯಕ್ಕಾಗಿ ನರಿಮೊಗರಿನಲ್ಲಿ ರೈಲು ನಿಲ್ದಾಣ ಮತ್ತು ನೀರು ತುಂಬಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ರೈಲು ಎಂಜಿನ್‌ಗಳು ನೀರು ತುಂಬಿಸಿಕೊಳ್ಳಲು ಇಲ್ಲಿ ನಿಲುಗಡೆಯಾಗುವ ಕಾರಣ ಇದನ್ನು ಪೂರ್ಣ ಪ್ರಮಾಣದ ರೈಲು ನಿಲ್ದಾಣವನ್ನಾಗಿ ನಿರ್ಮಾಣ ಮಾಡಲಾಗಿದೆ.

ಎಲ್ಲ ರೈಲುಗಳಿಗೆ ನಿಲುಗಡೆ
ಮೀಟರ್‌ಗೆàಜ್‌ ಹಳಿಗಳಲ್ಲಿ ರೈಲು ಬಂಡಿ ಓಡುತ್ತಿದ್ದ ಸಂದರ್ಭ ನರಿಮೊಗರು ರೈಲು ನಿಲ್ದಾಣದಲ್ಲಿ ಲೋಕಲ್‌ ರೈಲು ಬಂಡಿಗಳ ಸಹಿತ ಎಲ್ಲ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‌ಗೆàಜ್‌ ಹಳಿಗಳಲ್ಲಿ 1984ರ ಬಳಿಕ ಡೀಸೆಲ್‌ ಎಂಜಿನ್‌ಗಳ ಓಡಾಟ ಆರಂಭವಾದ ಬಳಿಕವೂ ನರಿಮೊಗರು ರೈಲು ನಿಲ್ದಾಣದಲ್ಲಿ ಎಲ್ಲ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು.

ಮೀಟರ್‌ಗೆàಜ್‌ ಹಳಿಗಳನ್ನು ಬ್ರಾಡ್‌ಗೆàಜ್‌ ಹಳಿಗಳಾಗಿ ಪರಿವರ್ತನೆ ಮಾಡುವ ಸಂದರ್ಭ ನರಿಮೊಗರು ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸ ಲಾಗಿತ್ತು. ಬ್ರಾಡ್‌ಗೆàಜ್‌ ಹಳಿಗಳ ಮೇಲೆ ರೈಲು ಬಂಡಿಗಳ ಓಡಾಟ ಆರಂಭವಾದ ಬಳಿಕ ದೂರ ಪ್ರಯಾಣದ ರೈಲು ಬಂಡಿಗಳಿಗೆ ನರಿಮೊಗರು ನಿಲ್ದಾಣದಲ್ಲಿ ನಿಲುಗಡೆ ರದ್ದುಪಡಿಸಲಾಯಿತು.

Advertisement

ಗೂಡ್ಸ್‌ ರೈಲುಗಳ ಕ್ರಾಸಿಂಗ್‌ ನಿಲ್ದಾಣ
ಸ್ಟೇಷನ್‌ ಮಾಸ್ಟರ್‌ ಇರುವ ಪೂರ್ಣ ಪ್ರಮಾಣದ ರೈಲು ನಿಲ್ದಾಣವಾದ ಕಾರಣ ನರಿಮೊಗರು ರೈಲು ನಿಲ್ದಾಣವನ್ನು ಗೂಡ್ಸ್‌ ರೈಲುಗಳ ಕ್ರಾಸಿಂಗ್‌ ನಿಲ್ದಾಣವನ್ನಾಗಿ ಬಳಸಲಾಗುತ್ತಿದೆ.

ಯಾವುದೇ ಕಾರಣಕ್ಕೂ ಈ ರೈಲು ನಿಲ್ದಾಣದಲ್ಲಿ ದೂರ ಪ್ರಯಾಣದ ರೈಲು ಬಂಡಿಗಳಿಗೆ ನಿಲುಗಡೆ ನೀಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ರೈಲ್ವೇ ಇಲಾಖೆ ಬಂದಿದೆ. ಆಧುನೀಕರಣಗೊಂಡಿರುವ ಈ ರೈಲು ನಿಲ್ದಾಣವನ್ನು ಮುಚ್ಚುವ ಬದಲು ಕ್ರಾಸಿಂಗ್‌ ರೈಲು ನಿಲ್ದಾಣವನ್ನಾಗಿ ಇಲಾಖೆ ಬಳಸುತ್ತಿದೆ. ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಗೂಡ್ಸ್‌ ಬಂಡಿಗಳ ಓಡಾಟ ಹೆಚ್ಚಾಗಿರುವುದರಿಂದ ಇಲಾಖೆಗೆ ಕ್ರಾಸಿಂಗ್‌ ನಿಲ್ದಾಣಗಳ ಅಗತ್ಯವೂ ಹೆಚ್ಚಿದೆ.

ಪ್ರಯಾಣಿಕರ ಸ್ಪಂದನೆ ಕೊರತೆ ಕಾರಣ?
ನರಿಮೊಗರು ರೈಲು ನಿಲ್ದಾಣದಿಂದ ದೂರ ಪ್ರಯಾಣದ ರೈಲುಗಳಿಗೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಹಾಗೂ ರೈಲು ನಿಲ್ದಾಣದ ಆದಾಯದ ಕೊರತೆಯ ಕಾರಣ ನೀಡಿ ದೂರ ಪ್ರಯಾಣದ ರೈಲು ಬಂಡಿಗಳ ನಿಲುಗಡೆ ಸ್ಥಗಿತವಾಯಿತು. ಈಗ ಮಂಗಳೂರು-ಸುಬ್ರಹ್ಮಣ್ಯ ಲೋಕಲ್‌ ರೈಲು ಬಂಡಿಗೆ ನರಿಮೊಗರು ರೈಲು ನಿಲ್ದಾಣದಲ್ಲಿ ನಿಲುಗಡೆ ಇದ್ದರೂ ಪ್ರತಿನಿತ್ಯ ಇಲ್ಲಿಂದ ರೈಲು ಏರುವ ಪ್ರಯಾಣಿಕರ ಸಂಖ್ಯೆ 10ನ್ನು ಮೀರುವುದಿಲ್ಲ. ಆದರೆ ಲೋಕಲ್‌ ರೈಲಾದ ಕಾರಣ ನಿಲುಗಡೆಯನ್ನು ಸ್ಥಗಿತಗೊಳಿಸಿಲ್ಲ. ಇಲಾಖಾ ಸಮೀಕ್ಷೆಯಂತೆ ಈ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸ್ಪಂದನೆ ಇಲ್ಲ ಎನ್ನುವ ವರದಿ ಇಲಾಖೆಯ ಕೈಸೇರಿದೆ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next