Advertisement
ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಬೀದರ, ಹುಮನಾಬಾದ, ಔರಾದ ಮತ್ತು ಬಸವಕಲ್ಯಾಣ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬರದಿಂದಾಗಿ ಜನರು ಉದ್ಯೋಗ ಅರಸಿಕೊಂಡು ಬೇರೆಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕಿದೆ. ನರೇಗಾ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಪ್ರತಿ ಕುಟುಂಬ 150 ದಿನ ಕೂಲಿ ಕೆಲಸ ನಿರ್ವಹಿಸಲು ಅವಕಾಶವಿದ್ದು, ಈ ಯೋಜನೆಯನ್ನು ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಗಳಿಗೆ ತಲುಪಿಸಬೇಕು ಎಂದು ಹೇಳಿದರು. ಯೋಜನೆ ಪ್ರಚಾರಕ್ಕಾಗಿ ತಾಲೂಕಿಗೊಂದು ಟಾಟಾ ಎಸಿ ವಾಹನಗಳನ್ನು ಬಾಡಿಗೆಗೆ ಪಡೆದು ವಾಹನದ ಸುತ್ತಲು ಉದ್ಯೋಗ ಖಾತ್ರಿ ಯೋಜನೆ ಮತ್ತು ಸ್ವತ್ಛ ಭಾರತ ಮಿಷನ್ ಯೋಜನೆ ಬ್ಯಾನರ್‌ಗಳನ್ನು ಸ್ಪಷ್ಟವಾಗಿ ಕಾಣುವಂತೆ ಅಂಟಿಸಬೇಕು. ಈ ವಾಹನವು ವಾರಕ್ಕೆ 3 ದಿನ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯೋಜನೆಯಡಿ ಕೂಲಿ ಪಡೆಯುವುದು ಕಾರ್ಮಿಕರ ಹಕ್ಕಾಗಿದೆ. ಈ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು. ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸುವ ಗುರಿ ಪೂರ್ಣಗೊಳಿಸಬೇಕು. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳು ಸಮರ್ಪಕವಾಗಿ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
Related Articles
ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ಅನುಮತಿಸಿದ ಕಾಮಗಾರಿಗಳು, ರೈತರ ಜಮೀನುಗಳಲ್ಲಿ ಗಿಡಗಳ ನೆಡುವಿಕೆ, ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಹಿಪ್ಪು ನೇರಳೆ ತೋಟ, ಮರಗಡ್ಡೆ ಹಿಪ್ಪು ನೇರಳೆ ಅಭಿವೃದ್ದಿ ಕಾಮಗಾರಿಗಳು ಹಾಗೂ ಸಮುದಾಯ ಕಾಮಗಾರಿಗಳಡಿ ಕೆರೆ, ಕಟ್ಟೆ ಹೂಳೆತ್ತುವುದು, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ರೈತಕಣ, ಕೃಷಿ ಹೊಂಡ, ಮಲ್ಟಿ ಆರ್ಚ್ ಚೆಕ್ ಡ್ಯಾಂ, ಗ್ರಾಮೀಣ ಗೋದಾಮು, ಅಂಗನವಾಡಿ ಕಟ್ಟಡ, ಗ್ರಾಮೀಣ ಉದ್ಯಾನವನ, ನಮ್ಮ ಹೊಲ ನಮ್ಮದಾರಿ, ಸಂತೆ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
Advertisement
ನರೇಗಾ ಯೋಜನೆಯಡಿ ಉದ್ಯೋಗ ಪಡೆಯಲು ಗ್ರಾಮೀಣ ಜನರು ಗ್ರಾಪಂಗಳಿಗೆ ಭೇಟಿ ನೀಡಿ ಅರ್ಜಿ ನಮೂನೆ-6 ಸಲ್ಲಿಸಬೇಕು ಅಥವಾ ಮೌಖೀಕವಾಗಿ ತಿಳಿಸುವ ಮೂಲಕ ಉದ್ಯೋಗ ಪಡೆಯಬಹುದು ಎಂದು ಹೇಳಿದರು.
ಜಿಪಂ ಉಪ ಕಾರ್ಯದರ್ಶಿಗಳಾದ ಕಿಶೋರಕುಮಾರ ದುಬೆ, ಸ್ವತ್ಛ ಭಾರತ ಮಿಷನ್ ಹೆಚ್ಚುವರಿ ಜಿಲ್ಲಾ ನೋಡಲ್ ಅಧಿಕಾರಿ ಡಾ| ಗೌತಮ ಅರಳಿ, ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಹಾಯವಾಣಿ ಕೇಂದ್ರ ಆರಂಭಬೀದರ: ಬೀದರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಪಂ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಂಭವವಿದ್ದು, ತಾಲೂಕಿನ ಸಾರ್ವಜನಿಕರು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಾಲೂಕು ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರ ತೆರೆದು ಸಿಬ್ಬಂದಿಗಳನ್ನು ನಿಯೋಜಿಸಿ ನೋಂದಣಿಯಾಗುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದರಂತೆ ಬೀದರ ತಾಪಂ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆ ಇದ್ದಲ್ಲಿ, ಉದ್ಭವಿಸಿದಲ್ಲಿ ಸಾರ್ವಜನಿಕರು ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ:08482-233154ಗೆ ಕರೆ ಮಾಡಿ ದೂರು ನೋಂದಾಯಿಸಬಹುದು ಎಂದು ಬೀದರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.