ಕೋಲಾರ: ರಾಜ್ಯದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ತಂಡ ತಾಲೂಕಿನ ವಕ್ಕಲೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳಡಿ ನಡೆಸಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ವಕ್ಕಲೇರಿ ಗ್ರಾಪಂ ವ್ಯಾಪ್ತಿಯ ಆಲಹಳ್ಳಿ, ಬಣಕನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಆರ್‌ಡಿಪಿಆರ್‌ನ ತಂಡ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಉಮೇಶ್ ಮಿರ್ಜಿ, ಉಪ ನಿರ್ದೇಶಕ ನಾಗರಾಜ್, ನರೇಗಾ ಯೋಜನೆಯಡಿ ನಡೆಸಿರುವ ರಾಜಕಾಲುವೆ, ಚರಂಡಿ ನಿರ್ಮಾಣ, ರಸ್ತೆ ನಿರ್ಮಾಣವನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
40 ಲಕ್ಷ ಮಾನವ ದಿನ ಸೃಜಿಸಲು ಗುರಿ: ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದೆ. ರೈತರು ಕೆಲಸವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಲು ನರೇಗಾದಡಿ ಮಾನವ ದಿನಗಳನ್ನು ಸೃಷ್ಟಿಸಿ ಕೆಲಸ ನೀಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ನರೇಗಾ ಪ್ರಯೋಜನ ಒದಗಿಸುವ ಉದ್ದೇಶದಿಂದ 40 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಲಾಗಿದೆ. ಯೋಜನೆಯಡಿ ಉತ್ತಮ ಕಾರ್ಯ ನಡೆಯುತ್ತಿದ್ದು, ಪ್ರತಿ ಕುಟುಂಬಕ್ಕೂ ಉದ್ಯೋಗ ಚೀಟಿ ನೀಡಲಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ ದಿನ 249 ಕೂಲಿ ನೀಡಲಾಗುತ್ತಿದ್ದು, ರೈತರು ಸಹ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ನರೇಗಾ ಅಡಿ 1,000 ಚೆಕ್‌ಡ್ಯಾಂ ಹಾಗೂ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆಲ ಚೆಕ್ ಡ್ಯಾಂಗಳ ನಿರ್ಮಾಣ ಪೂರ್ಣಗೊಂಡಿದ್ದು, ಇತ್ತೀಚಿಗೆ ಅದ ಮಳೆಗೆ ನೀರು ಸಂಗ್ರಹವಾಗಿದೆ. ಈ ಯೋಜನೆಯಡಿ ಜಲ ಸಂರಕ್ಷಣೆಗೆ ಹೆಚ್ಚು ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಮಸ್ಯೆ ಬಗೆಹರಿದಿದೆ: ಜಿಲ್ಲೆಯ ಪ್ರತಿ ಗ್ರಾಮದ ಕೆರೆಯಲ್ಲಿ ಹೊಂಡ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಈಗಾಗಲೇ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಒಬ್ಬ ರೈತ ದಿನಕ್ಕೆ ಎಷ್ಟು ಪ್ರಮಾಣದ ಹಾಳ ತೆಗೆಯಬೇಕು ಎಂದು ಗುರುತುಹಾಕಿಕೊಡಲಾಗುತ್ತದೆ. ಅವರು ಅದನ್ನು ನಮ್ಮ ನಿರೀಕ್ಷೆಯಂತೆ ಇನ್ನು ಬೇಗನೆ ಕೆಲಸ ಮುಗಿಸುತ್ತಿದ್ದಾರೆ. ಇದರಿಂದ ರೈತರ ಆರ್ಥಿಕ ಸಮಸ್ಯೆಯೂ ಬಗೆಹರಿಯಲಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮ್ಮೀನಾರಾಯಣ, ತಾಪಂ ಇಒ ಡಾ.ನಾರಾಯಣಸ್ವಾಮಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಪ್ಪ ಹಾಜರಿದ್ದರು.