Advertisement

ಕೆರೆ ಒಡಲು ಸೇರಿದ ಕಸ

12:56 PM Aug 12, 2019 | Team Udayavani |

ನರೇಗಲ್ಲ: ಒಂದು ಕಾಲಕ್ಕೆ ಪಟ್ಟಣ ಸೇರಿದಂತೆ ಮಜರೆ ಗ್ರಾಮಗಳ ಮಡಿವಾಳ ಜನಾಂಗದವರಿಗೆ ಬಟ್ಟೆ ತೊಳೆಯಲು ಆಸರೆಯಾಗಿದ್ದ ಕೋಚಲಾಪುರದ ಅಗಸರ ಕೆರೆಗೆ ಈಗ ಕಸ ಸೇರುತ್ತಿದೆ.

Advertisement

ಸುಮಾರು 3.22 ಎಕರೆ ವಿಸ್ತೀರ್ಣದ ಕೆರೆ ಸದ್ಯ ಕಸ ವಿಲೇವಾರಿಯ ತಾಣವಾಗಿದೆ. ಪ್ರತಿನಿತ್ಯ ರಾಶಿ ರಾಶಿ ಕಸ ಕೆರೆಯೊಡಲು ಸೇರುತ್ತಿದ್ದು, ಕೆರೆಯಂಗಳ ವಿಷದ ಗರ್ಭವಾಗಿ ಪರಿವರ್ತನೆಯಾಗುತ್ತಿದೆ.

ಕೆರೆ ಅಂಗಳ ಮತ್ತು ನೀರಿನ ಮೂಲಗಳ ಬಳಿ ಕಸ ವಿಲೇವಾರಿ ಮಾಡಬಾರದು ಎಂಬ ನಿಯಮವಿದ್ದರೂ ಕೋಚಲಾಪುರ ಕೆರೆಯಲ್ಲಿ ಕಸ ವಿಲೇವಾರಿ ಎಗ್ಗಿಲ್ಲದೆ ಸಾಗಿದೆ. ಗ್ರಾಮದ ಪ್ರತಿಯೊಂದು ಮನೆ ಹಾಗೂ ಚರಂಡಿ ತ್ಯಾಜ್ಯವನ್ನು ಕೆರೆಯಲ್ಲಿ ಸುರಿಯಲಾಗುತ್ತಿದೆ. ಖಾಲಿ ಬಾಟಲಿ, ಪ್ಲಾಸ್ಟಿಕ್‌ ಚೀಲ ಸೇರಿದಂತೆ ತ್ಯಾಜ್ಯವನ್ನು ತುಂಬಿಸಿ ಕೆರೆಗೆ ಎಸೆಯಲಾಗುತ್ತದೆ. ಮತ್ತೂಂದೆಡೆ ಹಳೆ ಕಟ್ಟಡಗಳ ಗಾರೆ, ಇಟ್ಟಿಗೆಯಂತಹ ನಿರುಪಯುಕ್ತ ವಸ್ತುಗಳನ್ನು ಕೆರೆ ದಂಡೆಯಲ್ಲಿ ಸುರಿಯಲಾಗಿದೆ. ಕೆರೆ ರಕ್ಷಿಸಬೇಕಾದ ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ.

ಕೆರೆಯಂಗಳದಲ್ಲಿ ಸುರಿಯಲಾದ ಕಸದ ರಾಶಿ ಬಳಿ ನಾಯಿ, ಹಂದಿ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ಇದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಸುತ್ತಮುತ್ತಲಿನ ಬಡಾವಣೆಗಳ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಪಟ್ಟಣದ ದ್ಯಾಂಪುರ ರಸ್ತೆಯಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯುವುದನ್ನು ಬಿಟ್ಟು ಗ್ರಾಮದ ಅಗಸರ ಕೆರೆಯಲ್ಲಿ ತ್ಯಾಜ್ಯ ಹಾಕುತ್ತಿದ್ದಾರೆ. ಪಪಂ ಅಧಿಕಾರಿಗಳು ತ್ಯಾಜ್ಯವನ್ನು ಕೂಡಲೇ ಸ್ವಚ್ಛಗೊಳಿಸಿ ಕೆರೆ ರಕ್ಷಣೆ ಮಾಡುವುದಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next