ನರೇಗಲ್ಲ: ಊರ ಹೊರವಲಯಕ್ಕೆ ಹೋದರೆ ಸಾಕು ಕತ್ತಾಳೆ ಗಮನಕ್ಕೆ ಬರುತ್ತದೆ. ದೂರದ ಊರುಗಳಿಂದ ಬಂದ ವಲಸಿಗರಿಗೆ ಈ ಕತ್ತಾಳೆ ಕೈ ಹಿಡಿದಿದೆ. ಹೌದು. ಕತ್ತಾಳೆ ನಾರು ಬೇರ್ಪಡಿಸಿ ಮಾರಾಟ ಮಾಡುವ ಕೆಲಸ ಇಲ್ಲಿ ಅವ್ಯಾಹತವಾಗಿ ನಡೆದಿದೆ. ಗುಳೆ ಬಂದ ಕುಟುಂಬಗಳಿಗೆ ಮೂರು ತಿಂಗಳು ಕಾಲ ಇದೇ ಕಾಯಕವಾಗಿದ್ದು, ಈ ಉದ್ಯೋಗ ಇವರ ಬದುಕಿನ ಆಧಾರವಾಗಿದೆ.
ಚಿತ್ರದುರ್ಗ, ಚಳ್ಳಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಉದ್ಯೋಗ ಅರಸಿ ಅನೇಕ ಕುಟುಂಬಗಳು ಇಲ್ಲಿಗೆ ವಲಸೆ ಬರುತ್ತವೆ. ಹೀಗೆ ವಲಸೆ ಬಂದವರು ಗದಗ-ಗಜೇಂದ್ರಗಡ ಮುಖ್ಯ ರಸ್ತೆಯಲ್ಲಿ ಕತ್ತಾಳೆ ಸಂಸ್ಕರಣೆ ಯಂತ್ರ ಸ್ಥಾಪಿಸಿ, ಕತ್ತಾಳೆಯಿಂದ ನಾರು ಬೇರ್ಪಡಿಸಿ ಮಾರಾಟ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಬೆಳಿಗ್ಗೆಯಿಂದಲೇ ಕಾಯಕ: ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಕತ್ತಾಳೆ ಯಂತ್ರ ಆರಂಭವಾಗುತ್ತಿದ್ದು, ಮಾಲೀಕ ಕೃಷ್ಣ ನಾಯಕ ಸ್ಥಳ ಮತ್ತು ವ್ಯಾಪಾರ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಉಳಿದ 20 ಜನರು ಕೂಲಿ ಮಾಡುತ್ತಾರೆ. ಇನ್ನು ಕೆಲವರು ಮನೆಯಲ್ಲೇ ಇರುತ್ತಾರೆ. ಪ್ರತಿ ವರ್ಷ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಮಾತ್ರ ಇವರ ಕೆಲಸ ಆರಂಭಗೊಳ್ಳುತ್ತದೆ.
ಇಲ್ಲಿ ಕತ್ತಾಳೆ ಹೆಚ್ಚು: ನರೇಗಲ್ಲ, ದ್ಯಾಂಪುರ, ಮಲ್ಲಾಪುರ, ತೋಟಗಂಟಿ, ಕೋಚಲಾಪುರ, ಅಬ್ಬಿಗೇರಿ, ಮಾರನಬಸರಿ, ಹಾಲಕೆರೆ, ಜಕ್ಕಲಿ, ಬೂದಿಹಾಳ, ನಿಡಗುಂದಿ, ನಿಡಗುಂದಿಕೊಪ್ಪ ಸುತ್ತಲಿನ ಗ್ರಾಮಗಳಲ್ಲಿ ಈ ಕತ್ತಾಳೆ ಹೆಚ್ಚು ಬೆಳೆಯುತ್ತಿದ್ದು, ಈ ಊರುಗಳಿಗೆ ತೆರಳಿ ರೈತರಿಂದ ಕತ್ತಾಳೆ ಎಲೆ ಖರೀದಿಸುತ್ತಾರೆ. ಜಮೀನಿನ ಬದುವಿನಲ್ಲಿ ಬೆಳೆದ ಕತ್ತಾಳೆ ಎಲೆ ಕತ್ತರಿಸಿ, ಸಂಸ್ಕರಣೆ ಮಾಡಿ ತಯಾರಾದ ನಾರನ್ನು ಹೊರ ತೆಗೆದು ಬಿಸಿಲಿಗೆ ಒಣಗಿಸಿ ಮಾರಾಟಕ್ಕೆ ಸಿದ್ಧಗೊಳಿಸುತ್ತಾರೆ.
ಉತ್ತಮ ಬೆಲೆ: ತಯಾರಾದ ನಾರಿನ ಸೂಡುಗಳನ್ನು ಕಟ್ಟಿ 20-30 ಕೆಜಿ ತೂಕದಷ್ಟು ತಯಾರಿಸಿ ಮಾರುಕಟ್ಟೆಗೆ ಕಳಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಟನ್ ನಾರಿನ ಮೂಟೆ ಬೆಲೆ 17 ಸಾವಿರ ರೂ. ಇದರಂತೆ ಮೂರು ತಿಂಗಳಲ್ಲಿ 20 ಟನ್ ನಾರು ತಯಾರಾಗುತ್ತದೆ ಎಂದು ಕಾರ್ಮಿಕ ಮಂಜುನಾಥ ತಿಳಿಸುತ್ತಾರೆ. ಒಂದು ಟ್ರಾಕ್ಟರ್ ತೂಕದ ಕತ್ತಾಳೆಗೆ 400 ರೂ. ಕೊಟ್ಟು ಖರೀದಿಸಲಾಗುತ್ತದೆ. ನಂತರ ಯಂತ್ರದಲ್ಲಿ ಹಾಕಿ, ನಾರು ಮಾತ್ರ ಹೊರ ತೆಗೆದು ಒಣಗಿಸಲಾಗುತ್ತದೆ. ವಾರ ಬಿಟ್ಟು ಮಾರುಕಟ್ಟೆಗೆ ಕಳಿಸಲಾಗುತ್ತದೆ. ಇದು ಕಾಯಂ ಉದ್ಯೋಗ ಅಲ್ಲ. ಆದರೆ, ಕೇವಲ ಮೂರ್‍ನಾಲ್ಕು ತಿಂಗಳಲ್ಲಿ ಮಾಡುವ ಕೆಲಸಕ್ಕೆ ಆದಾಯ ಸಿಗುತ್ತದೆ. ಖರ್ಚು ಕೂಡ ಅಷ್ಟಕ್ಕಷ್ಟೇ. ಟನ್ ಲೆಕ್ಕದಲ್ಲಿ ಮಾರಾಟ ಮಾಡುವುದರಿಂದ ಬೆಲೆ ಕುಸಿತ ಕಂಡರೆ ನಷ್ಟ ಅನುಭವಿಸಬೇಕಾಗುತ್ತದೆ. ಬೆಲೆ ಹೆಚ್ಚಿದರೆ ಲಾಭವಾಗುತ್ತದೆ ಎನ್ನುತ್ತಾರೆ ಕೃಷ್ಣ ನಾಯಕ.
ನಾರಿನಿಂದ ವ್ಯವಸಾಯಕ್ಕೆ ಬಳಸುವ ಹಗ್ಗ, ಕಣ್ಣಿ, ಕಲ್ಲಿ ಅಲ್ಲದೆ ಕೆಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೇರು ಎಳೆಯಲು ನಾರಿನಿಂದ ತಯಾರಿಸಿದ ಹಗ್ಗ ಉಪಯೋಗಿಸುತ್ತಾರೆ. ಕತ್ತಾಳೆ ನಾರಿನಿಂದ ವ್ಯಾನಿಟಿ ಬ್ಯಾಗ್, ಕೈ ಚೀಲ ತಯಾರಿಸುತ್ತಾರೆ. ನಾರು ತೆಗೆದ ನಂತರ ಉಳಿಯುವ ಸಿಪ್ಪೆ ಉತ್ತಮ ಗೊಬ್ಬರ. ನಾರು ತೆಗೆಯುವಾಗ ಹೊರ ಹೊಮ್ಮುವ ರಸ ಬೆಳೆಗಳಿಗೆ ತಗಲುವ ರೋಗಕ್ಕೆ ಔಷಧ. ಹೀಗಾಗಿ ಈ ಕತ್ತಾಳೆಗೆ ಹೆಚ್ಚಿನ ಬೇಡಿಕೆ ಇದೆ.
.
ಕಾಳಪ್ಪ, ಮಂಜುನಾಥ, ತಿಪ್ಪೇಸ್ವಾಮಿ, ಕೂಲಿ ಕಾರ್ಮಿಕರು
ಸಿಕಂದರ ಎಂ. ಆರಿ