ನರೇಗಲ್ಲ: ಪಟ್ಟಣದ ಐತಿಹಾಸಿಕ ನಾಗರ ಕೆರೆ ಈಗ ದುರ್ನಾತ ಬೀರುವ ತಾಣವಾಗಿದೆ. ಕಳೆದ 25 ದಿನಗಳಿಂದ ಕೆರೆ ದುರ್ನಾತ ಬೀರುತ್ತಿದ್ದು, ಅದರ ಸುತ್ತಮುತ್ತಲಿನ ರಸ್ತೆಯಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೆರೆಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆ ಆಗುತ್ತಿದೆ. ಕೆರೆ ಸ್ವತ್ಛತೆಗೆ ಪಟ್ಟಣ ಪಂಚಾಯತಿ, ಜಿಲ್ಲಾಡಳಿತವಾಗಲಿ ಯಾವುದೇ ರೀತಿ ಗಮನಹರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಕೆರೆಯಲ್ಲಿ ವಿವಿಧ ವಾರ್ಡ್‌ಗಳಿಂದ ಕಸ, ಕಡ್ಡಿ, ಕಟ್ಟಡ ತ್ಯಾಜ್ಯ ತಂದು ಹಾಕಲಾಗುತ್ತಿದ್ದು, ಐತಿಹಾಸಿಕ ಕೆರೆ ಈಗ ತಿಪ್ಪೆಯಂತೆ ಗೋಚರವಾಗುತ್ತಿದೆ.
ಮಳೆಗಾಲದಲ್ಲಿ ನಾಲ್ಕಾರು ಮಳೆ ಬಿದ್ದ ಬಳಿಕ ಕೆರೆ ಸ್ವಲ್ಪ ಸ್ವತ್ಛಗೊಳ್ಳುತ್ತದೆಯಷ್ಟೇ. ಒಂದೆರಡು ತಿಂಗಳಲ್ಲಿ ಮತ್ತೆ ಕೆರೆ ಕಸದ ತೊಟ್ಟಿಯಾಗುತ್ತದೆ. ಹೀಗೆ ಕಸ ಸುರಿಯುತ್ತ ಬಂದಿರುವುದರಿಂದ 2. 29 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಈಗ ಹೂಳು ತುಂಬಿದೆ. ಪಟ್ಟಣದಲ್ಲಿ ಅನೇಕ ಕೆರೆಗಳು ಈಗ ಕಾಣದಂತಾಗಿದ್ದು, ಈ ಕೆರೆಗೂ ಅದೇ ಸ್ಥಿತಿ ಬರಲಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ.
ಕೆರೆ ಪಕ್ಕದಲ್ಲಿರುವ ಉರ್ದು ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಗೆ ದಿನ ನಿತ್ಯ ನೂರಾರು ಜನರು ಇದೆ ಮಾರ್ಗವಾಗಿ ಹೋಗುತ್ತಾರೆ ಹಾಗೂ ಕೆರೆ ದಂಡೆ ಮೇಲೆ ನಾಗಪ್ಪನ ಕಟ್ಟೆ ಇದೆ. ಆದರೆ, ಈಗ ಕೆರೆ ದುರ್ನಾತ ಬೀರುತ್ತಿರುವುದರಿಂದ ಶಾಲೆಗೆ ಹೋಗುವ ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಬರುವ ಜನರು ಮೂಗು ಮುಚ್ಚಿಕೊಂಡೇ ಒಡಾಡಬೇಕಾಗಿದೆ. ಶಾಲೆಗೆ ಹಾಗೂ ಆಸ್ಪತ್ರೆಗೆ ಬರುವ ಜನರು ರೋಗ ತೆಗೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಕೆರೆಯಲ್ಲಿನ ನೀರು ಈಗ ಹಸಿರು ಬಣ್ಣಕ್ಕೆ ತಿರುಗಿದೆ ಎಂದು ರಮೇಶ ಕೋಲಕಾರ, ಪ್ರಕಾಶ, ಮಹೇಶ ಶಿವಶಿಂಪರ ಸಮಸ್ಯೆ ವಿವರಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಡೀ ಕೆರೆಯನ್ನೇ ಆಪೋಶನ ತೆಗೆದುಕೊಂಡಂತಾಗಿದೆ. ಚರಂಡಿಯಲ್ಲಿ ತುಂಬಿದ ನೀರು ನೇರ ನಾಗರ ಕೆರೆಗೆ ಸೇರುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಎಷ್ಟೇ ಮಳೆ ಬಂದರೂ ಸಹ ಕರೆ ಶುದ್ಧವಾಗದಂತಹ ಸ್ಥಿತಿಗೆ ತಲುಪಿದೆ. ವರ್ಷಗಟ್ಟಲೆಯಿಂದ ಕಲುಷಿತ ತ್ಯಾಜ್ಯ ನೀರು ಸಂಗ್ರಹಗೊಂಡಿದೆ. ಒಂದು ದೊಡ್ಡ ಕರೆ ಇಂದು ಕಲುಷಿತ ನೀರು ನಿಂತಿರುವ ಒಂದು ಚಿಕ್ಕ ಗುಂಡಿಯಂತಾಗಿದೆ. ಪರಿಣಾಮ ಸೊಳ್ಳೆ, ಕ್ರಿಮಿಕೀಟಗಳ ಕಾಟ ದಿನೇ ದಿನೇ ಹೆಚ್ಚಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಕೆರೆ ಇತಿಹಾಸ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಜೀವನಾಡಿಯಾಗಿದ್ದ ನಾಗರ ಕೆರೆ ನೀರಿನಿಂದ ಇಲ್ಲಿನ ದರ್ಗಾದ ಅಜ್ಜನವರು ಉರುಸು ಸಮಯದಲ್ಲಿ ದೀಪ ಹೆಚ್ಚುತ್ತಿದ್ದರು. ಇಲ್ಲಿನ ಜನರಿಗೆ ಚರ್ಮದ ರೋಗ ವಾಸಿಮಾಡುವಂತಹ ಪವಾಡ, ಶಕ್ತಿ ಕೆರೆ ನೀರಿಗೆ ಇತ್ತು ಎಂಬ ನಂಬಿಕೆ ಜನರಲ್ಲಿದೆ. ಆದರೆ ಈಗ ನಾಗರ ಕೆರೆ ರೋಗ ಹರಡುವಂತಹ ತಾಣವಾಗಿ ನಿರ್ಮಾಣವಾಗಿದೆ. ಜೊಂಡು, ಕಲುಷಿತ ತ್ಯಾಜ್ಯ ಎಲ್ಲವೂ ಕೆರೆಯಲ್ಲಿ ಸೇರಿ ದುರ್ನಾತ ಬೀರುತ್ತಿದೆ. ದಿನ ಕಳೆದಂತೆ ಕೆರೆ ವಿಸ್ತೀರ್ಣ ಕೂಡ ಕಡಿಮೆಯಾಗುತ್ತಿದ್ದು, ಇಡೀ ಕರೆ ಸಾಯುವ ಸ್ಥಿತಿಯಲ್ಲಿದೆ.
ಶಾಸಕರಿಗೆ, ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆರೆ ದುರ್ನಾತಕ್ಕೆ ವಾರ್ಡ್ 7ರ ಜನರು, ವಿದ್ಯಾರ್ಥಿಗಳು ರೋಗ ಭೀತಿಯಿಂದ ಭಯಗೊಂಡಿದ್ದಾರೆ. ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಅಡಿ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರರೂ. ನೀಡುತ್ತಿದ್ದು, ಎಷ್ಟೋ ಕಡೆ ಕೆಲಸ ಮಾಡದೇ ಬಿಲ್ ಆಗಿದೆ. ಆದರೆ ಈ ಇಲಾಖೆ ಅಧಿಕಾರಿಗಳಿಗೆ ನಾಗರ ಕೆರೆ ಕಾಣಲಿಲ್ಲವೇ?
ಬಸವರಾಜ ವಂಕಲಕುಂಟಿ,
ವಾರ್ಡ್ ನಂ.7ರ ನಿವಾಸಿ
ಸಿಕಂದರ್ ಎಂ. ಆರಿ