ನರೇಗಲ್ಲ: ಹೆಚ್ಚು ಉಪನ್ಯಾಸಕರನ್ನು ಹೊಂದಿರುವ ಡ.ಸ. ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಹಲವು ಸಮಸ್ಯೆಗಳ ಆಗರವಾಗಿದೆ. ಸ್ವಂತ ಕಟ್ಟಡ, ವಿದ್ಯುತ್ ಸಂಪರ್ಕ ಇಲ್ಲದೆ ಇಕ್ಕಟ್ಟಾದ ಶ್ರೀ ಬಸವೇಶ್ವರ ರಂಗ ಮಂದಿರದ ಕೋಣೆಯೊಂದರಲ್ಲಿ ಗ್ರಂಥಾಲಯವಿದೆ. ಗ್ರಂಥಾಲಯಕ್ಕೆ 80ಕ್ಕೂ ಅಧಿ ಕ ನೋಂದಾಯಿತ ಸದಸ್ಯರಿದ್ದು, ಅವರೇ ತಮಗೆ ಬೇಕಾದ ಪುಸ್ತಕಗಳನ್ನು ರ್ಯಾಕ್‌ನಿಂದ ಪಡೆಯಬಹುದು. ಗಾಳಿ-ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿ ಪುಸ್ತಕ ಹುಡುಕುವುದು ಸಾಹಸದ ಕೆಲಸವಾಗಿದೆ. ಕುಡಿಯುವ ನೀರು, ಶೌಚಾಲಯ ಮೊದಲಾದ ಸೌಕರ್ಯಗಳು ಗಗನ ಕುಸುಮವಾಗಿವೆ.
ನೆಲದ ಮೇಲೆ ಕುಳಿತು ಓದುವ ಸ್ಥಿತಿ: ಓದುಗರು ಕೂರಲು ಸಾಕಷ್ಟು ಸ್ಥಳಾವಕಾಶವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಗ್ರಂಥಾಲಯದಲ್ಲಿ ವಿದ್ಯುತ್ ಸಂಪರ್ಕವಿಲ್ಲ, ರಂಗ ಮಂದಿರ ಆದ ಕಾರಣ ಓದುಗರು ತಮಗೆ ಬೇಕಾದ ಪತ್ರಿಕೆ, ಪುಸ್ತಕ ಪಡೆದು ರಂಗ ಮಂದಿರದ ನೆಲದ ಮೇಲೆ ಕುಳಿತುಕೊಂಡು ಓದುತ್ತಾರೆ. ಗ್ರಂಥಾಲಯ ಸುತ್ತಮುತ್ತ ಗದ್ದಲ-ಗಲಾಟೆ ಪರಿಸರವಿದೆ.
ಈ ಗ್ರಂಥಾಯಲವು ಜಿ.ಪಂ, 1999-2000 ಸಾಲಿನ ಲೋಕಸಭಾ ಸದಸ್ಯರ ಅನುದಾನದಲ್ಲಿ ನಿರ್ಮಿಸಿದ ಬಸವೇಶ್ವರ ರಂಗ ಮಂದಿರದ ಚಿಕ್ಕ ಕೊಠಡಿಯಲ್ಲಿ 2002-03ನೇ ಸಾಲಿನಲ್ಲಿ ಕೇವಲ 72 ಪುಸ್ತಕಗಳೊಂದಿಗೆ ಆರಂಭವಾಗಿತ್ತು. ಸದ್ಯ 2169 ಪುಸ್ತಕ ಹೊಂದಿದೆ. ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವೆ. ಗ್ರಾ.ಪಂ ಸೇರಿದಂತೆ ಅನೇಕ ಹಿರಿಯ ಉಪನ್ಯಾಸಕರು ಇರುವುದರಿಂದ ಹೆಚ್ಚು ಕಥೆ, ಕಾದಂಬರಿ, ಮಕ್ಕಳ ಕಥೆ, ಸ್ಪರ್ಧಾತ್ಮಕ ಪುಸ್ತಕಗಳಿಗೆ ಬೇಡಿಕೆ ಇದೆ.
ಗ್ರಂಥಾಲಯ ಚಿಕ್ಕ ಕೋಣೆಯಾಗಿರುವುದರಿಂದ ಟೇಬಲ್, ಖರ್ಚಿ, ಅಲ್ಮೇರಾ ಹಾಕಲು ಸ್ಥಳಾವಕಾಶ ಇಲ್ಲದಿರುವುದರಿಂದ ನಿತ್ಯ ಬರುವ 100ಕ್ಕೂ ಅಧಿಕ ಓದುಗರು ನೆಲದ ಮೇಲೆ ಕುಳಿತುಕೊಂಡು ಓದುವ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡ ಉದ್ಘಾಟನೆ ಯಾವಾಗ?: ಈಗಾಗಲೇ ಜಿಪಂ-ತಾಪಂ, ಗ್ರಾಪಂ 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೇ ಗ್ರಂಥಾಲಯದಲ್ಲಿರುವ ಟೇಬಲ್-ಖುರ್ಚಿಗಳನ್ನು ಹೊಸ ಕಟ್ಟಡದಲ್ಲಿಡಲಾಗಿದೆ. ಕೂಡಲೇ ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೂತನ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಪ್ರಜ್ಞಾವಂತರ ಒತ್ತಾಸೆ.