ಸಿಕಂದರ ಎಂ. ಆರಿ
ನರೇಗಲ್ಲ: ಸ್ವಾತಂತ್ರ್ಯ ಬಳಿಕ ನಿರ್ಮಿಸಲಾದ ಜಕ್ಕಲಿ ಗ್ರಾಮದ ಗರಡಿ ಮನೆ ಹೆಂಚುಗಳಿಗೆ ಅಲ್ಲಲ್ಲಿ ತೂತು ಬಿದ್ದು, ದುರಸ್ತಿಗಾಗಿ ಕಾಯುತ್ತಿದೆ. ಗರಡಿ ಮನೆ ಮೇಲ್ಛಾವಣಿ, ಗೋಡೆ ಬಿರುಕು ಬಿಟ್ಟಿವೆ. ಹೆಗ್ಗಣ, ಇಲಿಗಳ ವಾಸಸ್ಥಾನವಾಗಿದೆ. ಕಾಲಿಡಲು ಭಯವಾಗುವ ಸ್ಥಿತಿಯಲ್ಲಿದೆ. ಗರಡಿ ಮನೆ ಮೇಲ್ಛಾವಣಿ ಹೆಂಚುಗಳು ಒಡೆದು ಹೋಗಿರುವುದರಿಂದ ಸೂರ್ಯನ ಕಿರಣ ಒಳಗೆ ಇಣುಕುತ್ತಿವೆ. ಮಳೆ ಬಂದರೆ ಸೋರುತ್ತಿದೆ.
ಜಕ್ಕಲಿ ಗ್ರಾಮದಲ್ಲಿ 1959ರಲ್ಲಿ ಗರಡಿ ಮನೆ ಆರಂಭವಾಗಿತ್ತು. ಕಳೆದ 30 ವರ್ಷಗಳ ಹಿಂದೆ 22ಕ್ಕೂ ಅಧಿಕ ಪೈಲ್ವಾನವರು ತರಬೇತಿ ಪಡೆಯುತ್ತಿದ್ದರು. ಪ್ರಸ್ತುತ ಪರಿಸ್ಥಿತಿಗೆ ಕೇವಲ ಐವರು ಪೈಲ್ವಾನರು ನಿತ್ಯ ಗರಡಿ ಮನೆಯಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾರೆ.
ಕುಂದುತ್ತಿರುವ ಆಸಕ್ತಿ: ಹಿಂದೆ ಕುಸ್ತಿ ಆಡುವುದು ಎಂದರೆ ಪ್ರತಿಷ್ಠೆ ಪ್ರಶ್ನೆಯಾಗಿತ್ತು. ಕುಸ್ತಿಯಲ್ಲಿ ವಿಜೇತನಾಗಿದ್ದರೆ ಊರು ತುಂಬೆಲ್ಲ ಮೆರವಣಿಗೆ ಮಾಡುತ್ತಿದ್ದರು. ಹಳ್ಳಿಗೂ ಹೆಮ್ಮೆಯ ವಿಷಯವಾಗುತ್ತಿತ್ತು. ಆದರೆ, ಇಂದು ಜಾತ್ರೆ, ರಥೋತ್ಸವಕ್ಕೆ ಸೀಮಿತವಾಗಿವೆ. ಇತ್ತೀಚಿನ ದಿನಗಳಲ್ಲಿ ದೇಹದಾರ್ಡ್ಯ ಸ್ಪರ್ಧೆಗೆ ಒತ್ತು ನೀಡುತ್ತ ಜಾನಪದ ಕಲೆಯಾಗಿದ್ದ ಕುಸ್ತಿಯಿಂದ ವಿಮುಖರಾಗುತ್ತಿದ್ದಾರೆ.
ಕುಸ್ತಿ ಪಟುಗಳನ್ನು ತಯಾರು ಮಾಡಲು ಗ್ರಾಮದ ಅನುಭವವುಳ್ಳ, ಹಿರಿಯ ಮಾಜಿ ಪೈಲ್ವಾನವರು ಇದ್ದಾರೆ. ಇವರ ಅನುಭವವನ್ನು ಯವ ಸಮುದಾಯ ಪಡೆಯುವತ್ತ ಆಸಕ್ತಿ ತೋರುತ್ತಿಲ್ಲ. ಗ್ರಾಮೀಣ ಕ್ರೀಡೆ ಸಂರಕ್ಷಿಸಲು ಇಂದಿನ ಯುವಕರು ಮುಂದೆ ಬರಬೇಕಿದೆ ಎಂಬುದು ಇಲ್ಲಿನ ಹಿರಿಯ ಪೈಲ್ವಾನರ ಮಾತಾಗಿದೆ.
ಬಂದಿಲ್ಲ ಅನುದಾನ: 1959ರಲ್ಲಿ ಸರ್ಕಾರದಿಂದ ನಿರ್ಮಾಣವಾದ ಗರಡಿ ಮನೆಗೆ ಅಭಿವೃದ್ಧಿ ಎಂಬುದು ದೂರದ ಮಾತಾಗಿದೆ. ಗರಡಿ ಮನೆ ಉಳಿಸಲು ಅನುದಾನ ನೀಡಬೇಕಾದ ಸರಕಾರ ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಮೂಲ ಸೌಲಭ್ಯವೇ ಇಲ್ಲಿ ಇಲ್ಲವಾಗಿದೆ.