Advertisement

ಜಕ್ಕಲಿ 283ರ ಅಂಗನವಾಡಿ ಕಟ್ಟಡದಲ್ಲಿ ಬಿರುಕು

10:23 AM Feb 04, 2019 | Team Udayavani |

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 283ರ ಕಟ್ಟಡ ಉದ್ಘಾಟನೆಯಾಗಿ ಕೆಲವೇ ತಿಂಗಳಲ್ಲಿ ಕಟ್ಟಡದ ಹಲವು ಕಡೆ ಬಿರುಕು ಕಾಣಿಸಿಕೊಂಡಿವೆ. ಇದರಿಂದ 20 ಲಕ್ಷ ರೂ. ವೆಚ್ಚದಲ್ಲಿ ಭೂಸೇನಾ ನಿಗಮ ಕೈಗೊಂಡ ಕಾಮಗಾರಿ ನಿಜ ಬಣ್ಣ ಬಯಲಾದಂತಾಗಿದೆ.

Advertisement

2013-14ನೇ ಸಾಲಿನಲ್ಲಿ ತಾಪಂ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್‌ಐಡಿಎಫ್‌ ಯೋಜನೆಯಡಿ ಅಂಗನವಾಡಿ ಕೇಂದ್ರ ಮತ್ತು ಗ್ರಂಥಾಲಯ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಭೂಸೇನಾ ನಿಗಮಕ್ಕೆ ಕಾಮಗಾರಿ ವಹಿಸಲಾಗಿತ್ತು. ಒಂದು ವರ್ಷದಲ್ಲಿ ಮುಗಿಸಬೇಕಾಗಿದ್ದ ಕಾಮಗಾರಿಗೆ ಎರಡು ವರ್ಷ ಮಾಡಿದರೂ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳದಿರುವುದು ಸಾರ್ವಜನಿಕರಿಗೆ ಹಾಗೂ ಅಂಗನಾಡಿ ಸಿಬ್ಬಂದಿಯನ್ನು ಕೆರಳಿಸುವಂತೆ ಮಾಡಿದೆ. ಅಂಗನವಾಡಿ ಕಟ್ಟಡದಲ್ಲಿ ಐದು ಕೋಣೆಗಳಿದ್ದು, ಪ್ರತಿಯೊಂದು ಕೋಣೆಯ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ತುಂಪು ಹಿಡಿಯುತ್ತಿದೆ.

ಅಂಗನವಾಡಿ ಕಟ್ಟಡದ ಉದ್ಘಾಟನೆಗಾಗಿ ಹಾಕಲಾಗಿದ್ದ ತೋರಣಗಳನ್ನು ಕೂಡ ತೆಗೆದಿಲ್ಲ. ಆದರೆ ಕಟ್ಟಡದ ಪ್ರತಿಯೊಂದು ಕೋಣೆಗಳಲ್ಲಿ ಬಿರುಕು ಬಿಟ್ಟಿದ್ದು, ಸಿಬ್ಬಂದಿ ಹಾಗೂ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ಅಂಗನವಾಡಿಯಲ್ಲಿ ಶೌಚಾಲಯಗಳ ಬಳಕೆ ಕೂಡ ಆಗಿಲ್ಲ. ಶೌಚಾಲಯ ಗೃಹಗಳಲ್ಲಿ ಭೂಸೇನಾ ನಿಗಮದವರು ತಮ್ಮ ಕಾಮಗಾರಿ ಮಾಡುವ ಸಲಕರಣೆಗಳನ್ನು ಆ ಕೋಣೆಯಲ್ಲಿ ಇಟ್ಟಿದ್ದಾರೆ. ಆದ್ದರಿಂದ, ಮಕ್ಕಳು ಹಾಗೂ ಸಿಬ್ಬಂದಿ ಶೌಚಕ್ಕೆ ಹೊರಗಡೆ ಹೋಗುವುದು ಅನಿರ್ವಾಯವಾಗಿದೆ.

ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಭೂಸೇನಾ ನಿಗಮಕ್ಕೆ ಲಕ್ಷ ರೂ. ವೆಚ್ಚದಲ್ಲಿ ಈ ಅಂಗನವಾಡಿಗೆ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ವಹಿಸಲಾಗಿದೆ. ಕಾಂಪೌಂಡ್‌ ಕಟ್ಟಡ ಕೂಡ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಈ ಕಾಮಗಾರಿ ಸಮೀಪದ ಹಳ್ಳಗಳಲ್ಲಿ ದೊರೆಯುವ ಮರಳನ್ನು ಕಾಂಪೌಂಡ್‌ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಪ್ರಶ್ನೆ ಕೇಳಿದಾಗ ಭೂಸೇನಾ ನಿಗಮದ ಅಧಿಕಾರಿಗಳು ಸಾರ್ವಜನಿಕರಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಲ್ಲದೆ, ಕಾಂಪೌಂಡ್‌ ಕಾಮಗಾರಿಗೆ ಕಳಪೆ ಗುಣಮಟ್ಟದ ಸಿಮೆಂಟ್ ಬಳಕೆ ಮಾಡಲಾಗುತ್ತಿದೆ. ಕಾಂಪೌಂಡ್‌ಗೆ ಸರಿಯಾದ ಸಮಯಕ್ಕೆ ಕ್ಯೂರಿಂಗ್‌ ಕೂಡ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲಾಧಿಕಾರಿ ಭೇಟಿಗೆ ಮನವಿ
ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಭೂಸೇನಾ ನಿಗಮದವರು ಕೈಗೊಂಡ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿವೆ. ಮೇಲಾಧಿಕಾರಿಗಳ ಗಮನಕ್ಕಾಗಿ ಹತ್ತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಪ್ರತಿಯೊಂದು ಅಂಗನವಾಡಿ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಅಂದಾಗ ಭೂಸೇನಾ ನಿಗಮದ ಅಧಿಕಾರಿಗಳ ನಿಜ ಬಣ್ಣ ಬಯಲಾಗುತ್ತದೆ.
ಉಮೇಶ ಮೇಟಿ, ಸ್ಥಳೀಯ

Advertisement

ಇಲಾಖೆ ಗಮನಕ್ಕೆ ಬಂದಿದೆ
ಜಕ್ಕಲಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 283ಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತೇನೆ. ಕಟ್ಟಡ ಬಿರುಕು ಬಿಟ್ಟಿವೆ ಎಂದು ಇಲಾಖೆಯ ಗಮನಕ್ಕೆ ಬಂದಿದೆ. ಕೂಡಲೇ ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ.
ಶ್ರೀನಿವಾಸ,
ಭೂಸೇನಾ ನಿಗಮದ ಸಹಾಯಕ ಕಾರ್ಯನಿರ್ವಹಕ ಅಭಿಯಂತರ

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next