ನರೇಗಲ್ಲ: ಸುಮಾರು ಮೂರ್‍ನಾಲ್ಕು ವರ್ಷಗಳಿಂದ ಮಳೆಯಾಗದೇ ಇರುವುದನ್ನು ಮನಗಂಡ ಈ ಭಾಗದ ಮಠಾಧೀಶರು, ರೈತರು, ಸಾರ್ವಜನಿಕರು, ಕಟ್ಟಡ ಕಾರ್ಮಿಕ ಬಂಧುಗಳು ಶ್ರಮದಾನ ಮೂಲಕ ಹಿರೇಕೆರೆ ಹೂಳೆತ್ತುವ ಕಾರ್ಯ ಕೈಗೊಂಡು ಪೂರ್ಣಗೊಳಿಸಿದ್ದಾರೆ.
ನರೇಗಲ್ಲ ಪಟ್ಟಣ ಸೇರಿದಂತೆ ಅಬ್ಬಿಗೇರಿ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ, ಕೋಡಿಕೊಪ್ಪ, ಕೋಟುಮಚಗಿ, ನಾರಾಯಣಪೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಸ್ವತಃ ಖರ್ಚು ಮಾಡಿ 30 ಎಕರೆ ಪ್ರದೇಶದಲ್ಲಿರುವ ಕೆರೆಯ ಹೂಳೆತ್ತುವಲ್ಲಿ ಸಫಲರಾಗಿದ್ದಾರೆ.
ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಡಾ|ಅಭಿನವ ಅನ್ನದಾನ ಸ್ವಾಮೀಜಿ ಹಾಗೂ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಸಹಾಯ-ಸಹಕಾರ ಹಾಗೂ ಪಟ್ಟಣದ ಸಮಾನ ಮನಸ್ಕರು, ಬುದ್ಧಿಜೀವಿಗಳು, ಪರಿಸರವಾದಿಗಳು, ಹಿತೈಷಿಗಳು ಕೆರೆಯ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಪಟ್ಟಣದ ಚಂದ್ರಮೌಳೇಶ್ವರ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಹಿರೇಕೆರೆಗೆ ಉಚಿತವಾಗಿ ಕಲ್ಲು ಜೋಡಿಸಿಕೊಡಲು ಮುಂದೆ ಬಂದಿದ್ದಾರೆ.
ವಾರದಲ್ಲಿ ಕನಿಷ್ಠ ಒಂದು ದಿನ ರಜೆ ತೆಗೆದುಕೊಳ್ಳುವ ಅವರು ಒಂದು ದಿನ ಹಿರೇಕೆರೆಗೆ ಕಲ್ಲು ಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮಯ ವಿಷಯ ಎನ್ನುತ್ತಾರೆ ನೆಲ ಜಲ ಸಂರಕ್ಷಣಾ ಸಮಿತಿಯ ಸದಸ್ಯ ಬಸವರಾಜ ವಂಕಲಕುಂಟಿ.
ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ rಪಟ್ಟಣದಲ್ಲಿ ಹಲವಾರು ಕೆರೆಗಳಿದ್ದು ಅವುಗಳ ದುರಸ್ತಿ ಕಾರ್ಯ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.